ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿಐಎಸ್ ಚಿಹ್ನೆಯುಳ್ಳ ಧ್ವಜ ಬಳಕೆಗೆ ಸೂಚನೆ

Vishwanath S
Updated On : 8 Aug 2013, 12:09 pm

ರಾಯಚೂರು: ಭಾರತೀಯ ಮಾನಕ ಸಂಸ್ಥೆ(ಬಿಐಎಸ್) ಚಿಹ್ನೆ ಇಲ್ಲದ ರಾಷ್ಟ್ರಧ್ವಜ ಮಾರಾಟ ಮತ್ತು ಖರೀದಿ ಶಿಕ್ಷಾರ್ಹ ಅಪರಾಧ ಎಂದು ಎಚ್ಚರಿಸಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು, ನಾಗರಿಕರು, ಸಂಘ ಸಂಸ್ಥೆಗಳು ಬಿಐಎಸ್ ಚಿಹ್ನೆ ಹೊಂದಿದ ರಾಷ್ಟ್ರಧ್ವಜ ಖರೀದಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲು ಮನವಿ ಮಾಡಿದೆ. ರಾಷ್ಟ್ರಧ್ವಜ ತಯಾರಿಕೆಗೆ ಬಿಐಎಸ್ ಕಟ್ಟಳೆ ವಿಧಿಸಿದೆ. ಕೈಯಿಂದ ನೂಲು ತೆಗೆದು ಕೈಯಿಂದ ನೇಯ್ದ ಬಟ್ಟೆಯಿಂದಲೇ ರಾಷ್ಟ್ರಧ್ವಜ ತಯಾರಿಸಬೇಕೆಂದು ಕಟ್ಟುನಿಟ್ಟಿನ ಕಾನೂನಿದೆ. ಆದಾಗ್ಯೂ ಮಾರುಕಟ್ಟೆಯಲ್ಲಿ ಬೇರೆ ರೀತಿಯ ಬಟ್ಟೆ ಬಳಸಿ ರಾಷ್ಟ್ರಧ್ವಜ ತಯಾರಿಸಿ ಮಾರಾಟ ಮಾಡುವುದು ಕಂಡುಬಂದಿದೆ. ನಾಗರಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜು ಮುಖ್ಯಸ್ಥರು ರಾಷ್ಟ್ರಧ್ವಜ ಖರೀದಿಸುವಾಗ ಮೋಸ ಹೋಗದೆ ಬಿಐಎಸ್ ಚಿಹ್ನೆ ಹೊಂದಿರುವ ರಾಷ್ಟ್ರಧ್ವಜ ಖರೀದಿಸಿ ಬಳಸುವಂತೆ ಸಂಘ ಮನವಿ ಮಾಡಿದೆ.
'ಅನ್ನಭಾಗ್ಯ' ಹೆಚ್ಚು ಹಣ ಪಡೆಯುತ್ತಿಲ್ಲ: ಸ್ಪಷ್ಟನೆ
ಚಿತ್ತಾಪುರ: ತಾಲೂಕಿನ ಇಟಗಾ ಗ್ರಾಮದಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚು ಹಣ ಪಡೆಯಲಾಗುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತಮ್ಮಣ್ಣ ದಿಗ್ಗಿ ಮಾಡಿದ ಆರೋಪ ಸುಳ್ಳಿನಿಂದ ಕೂಡಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಶಿವರಾಜ ಡಿಗ್ಗಿ, ಗ್ರಾಮಸ್ಥರಾದ ನಾಗೇಂದ್ರಪ್ಪ ಡಿಗ್ಗಿ, ಸಾಬಣ್ಣ ಡಿಗ್ಗಿ, ಮೈಲಾರಿ ಡಿಗ್ಗಿ, ಸಿದ್ದರಾಮ ಕೋಗನೂರ, ಚಂದ್ರಕಾಂತ ನಾಯ್ಕಲ್ ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿಗಳು 1ಕ್ಕೆ ಕೆ.ಜಿ. ಅಕ್ಕಿ ನೀಡುವಂತೆ ಈ ಯೋಜನೆ ಜಾರಿಗೊಳಿಸಿದ್ದಾರೆ. ಅದರಂತೆ ಇಲ್ಲಿನ ನ್ಯಾಯಬೆಲೆ ಅಂಗಡಿಗಳಲ್ಲಿ 1ಕ್ಕೆ ಕೆ.ಜಿ ಅಕ್ಕಿ ವಿತರಿಸಲಾಗುತ್ತಿದೆ. 1.50 ರಿಂದ 2 ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರ ಎಂದು ತಿಳಿಸಿದ್ದಾರೆ. ಆರೋಪ ಮಾಡುವವರು ಉಚಿತವಾಗಿ ಅಕ್ಕಿ, ಸಕ್ಕರೆ, ಗೋದಿ ನೀಡುವಂತೆ ನ್ಯಾಯಬೆಲೆ ಅಂಗಡಿಯವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದಾಗಿ ನ್ಯಾಯಬೆಲೆ ಅಂಗಡಿಯವರು ತೊಂದರೆ ಅನುಭವಿಸುವಂತಾಗಿದೆ ಎಂದು  ತಹಸೀಲ್ದಾರ್‌ಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಕಾಳಿಕಾದೇವಿಗೆ ನಿತ್ಯ ಪಂಚಾಮೃತಾಭಿಷೇಕ
ಹುಣಸಗಿ: ಪಟ್ಟಣದ ಕೆಂಭಾವಿ ವೃತ್ತದಲ್ಲಿರುವ ಕಾಳಿಕಾದೇವಿಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಪ್ರತಿದಿನವು ಬೆಳಿಗ್ಗೆ ಪಂಚಾಮೃತಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 6ರಿಂದ 9 ಗಂಟೆಯವರೆಗೂ ವಿದಿವಿಧಾನದಿಂದ ಅಭಿಷೇಕ ನಡೆಯಲಿದೆ. ಶ್ರಾವಣ ಮಾಸದ ತಿಂಗಳವರೆಗೆ ನಡೆಯಲಿದೆ. ದೇವಿಯ ಪೂಜೆ ಮತ್ತು ಅಭಿಷೇಕವನ್ನು ಕಾಳಿಕಾದೇವಿ ದೇವಸ್ಥಾನದ ಅರ್ಚಕ ಕಾಳಪ್ಪ ಪತ್ತಾರ್ ನಡೆಸಿಕೊಡಲಿದ್ದಾರೆ. ರಾತ್ರಿ 8ರಿಂದ ಭಜನಾ ಕಾರ್ಯಕ್ರಮ. ಸೆಪ್ಟಂಬರ್ 5ರವರೆಗೆ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿದ್ದು, ಆಸಕ್ತ ಭಕ್ತಾಧಿಗಳು ಭಜನೆಯಲ್ಲಿ ಪಾಲ್ಗೊಳ್ಳಲು ಕಾಳಿಕಾದೇವಿ ಸಂಘದ ಹುಣಸಗಿ ಅಧ್ಯಕ್ಷ ಮನೋಹರ ಪತ್ತಾರ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಮಿಟಿಯ ಉಪಾಧ್ಯಕ್ಷ ದೇವಿಂದ್ರ ಬಡಿಗೇರ್, ಖಜಾಂಚಿ ರಾಘವೇಂದ್ರ ಪತ್ತಾರ, ಈರಣ್ಣ ಪತ್ತಾರ ಸೇರಿದಂತೆ ವಿಶ್ವಕರ್ಮ ಸಮಾಜದ ಬಂಧುಗಳು ಇದ್ದರು. ಅಭಿಷೇಕ ಮಾಡಿಸುವ ಆಸಕ್ತಿಯುಳ್ಳ ಭಕ್ತರು ಸಂಪರ್ಕಿಸಬಹುದು. ದೂ. 9008565067, 9448564558 ಅರ್ಚಕರು- 9972761518.
ವಾಹನ ವಿತರಣೆ
ಶಹಾಪುರ: ಪಟ್ಟಣದ ಐಬಿ ಹಿಂದುಗಡೆಯ ಕಾಂಗ್ರೆಸ್ ಕಾರ್ಯಲಯದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದ ಸುಮಾರು 10.05 ಲಕ್ಷವೆಚ್ಚದಲ್ಲಿ, 16 ಟಿವಿಎಸ್ ಕಂಪನಿಯ ತ್ರಿಚಕ್ರ ವಾಹನಗಳನ್ನು, ಯಾದಗಿರಿ ಮತಕ್ಷೇತ್ರದ ಅಂಗವಿಕಲರಿಗೆ ಶಾಸಕ ಡಾ. ಮಾಲಕರಡ್ಡಿ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆಯುವಂತೆ ತಿಳಿಸಿದರು. ಶ್ರೀನಿವಾಸರೆಡ್ಡಿ ಕಂದಕೂರ, ಶರಣಗೌಡ ಅರಕೇರಿ, ಸುನೀಲಗೌಡ  ಹಾಜರಿದ್ದರು.
ಮಗು ಸಾವಿಗೆ ಅಪೌಷ್ಟಿಕತೆ ಕಾರಣ: ಶಂಕೆ
ರಾಯಚೂರು: ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಚಿತ್ರನಾಳ ಗ್ರಾಮದಲ್ಲಿ ಮಗುಮೊಂದು ಸಾವಿಗೀಡಾಗಿದ್ದು, ಅಪೌಷ್ಟಿಕತೆಯಿಂದ ಬಳಲಿ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮೃತ ಬಾಲಕನನ್ನು ನಿತೀಶ್(3) ಎಂದು ಗುರ್ತಿಸಲಾಗಿದೆ. ಈ ಬಾಲಕನ ಪಾಲಕರು ಕಳೆದ 4 ವರ್ಷಗಳಿಂದ ಗೋವಾದಲ್ಲಿ ವಾಸವಾಗಿದ್ದು, ಚಿತ್ರನಾಳ ಗ್ರಾಮದಲ್ಲಿನ ಗ್ರಾಮದೇವತೆ ಜಾತ್ರೆಗೆ ಆಗಮಿಸಿದ್ದ ವೇಳೆ ಮಗು ಸಾವನ್ನಪ್ಪಿದೆ. ಕುಟುಂಬ ಮೂಲಗಳ ಪ್ರಕಾರ ಮಗು ಅಪೌಷ್ಟಿಕತೆಯಿಂದ ಬಳಲಿ ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾರಾಯಣಪ್ಪ ಪ್ರತಿಕ್ರಿಯಿಸಿದ್ದು, ಮಗುವಿನ ಸಾವಿಗೆ ಅಪೌಷ್ಟಿಕತೆ ಸೇರಿ ಬೇರಾವುದೇ ಕಾರಣವಿರುವ ಬಗ್ಗೆ ಇಲಾಖೆಗೆ ಮಾಹಿತಿ ಬಂದಿಲ್ಲ ಎಂದು ತಿಳಿಸಿದ್ದಾರೆ.
ಇಂದಿನಿಂದ ವಿದ್ಯುತ್ ವ್ಯತ್ಯಯ
ರಾಯಚೂರು: ಕೆಪಿಟಿಸಿಎಲ್ ವತಿಯಿಂದ ವಿದ್ಯುತ್ ವಾಹಕ ತಂತಿ ಬದಲಾವಣೆ ಹಿನ್ನೆಲೆ ಆ.8ರಿಂದ ಆ.14ರವರೆಗೆ ನಗರದ ಕೆಲ ಪ್ರದೇಶಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಕೆಪಿಟಿಸಿಎಲ್ ಪ್ರಕಟಣೆ ನೀಡಿದ್ದು, ಈ ಅವಧಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನಗರದ ನಿಜಲಿಂಗಪ್ಪ ಕಾಲನಿ, ವೆಂಕಟೇಶ್ವರ ಕಾಲನಿ, ಬಂದೇನವಾಜ್ ಕಾಲನಿ, ದೇವರಾಜ ಅರಸ್ ಕಾಲನಿ, ಬಸವೇಶ್ವರ ಕಾಲನಿ, ಮಹಾರಾಣಾ ಪ್ರತಾಪ ಕಾಲನಿ, ವಿವೇಕಾನಂದ ಕಾಲನಿ, ನಿಜಾಮುದ್ದಿನ್ ಕಾಲನಿ, ಮಾರೆಮ್ಮ ಗುಡಿ ಹತ್ತಿರ, ಹೊಸೂರು, ಅಸ್ಕಿಹಾಳ, ಅಗ್ರಿಕಲ್ಚರ್ ಕ್ಯಾಂಪಸ್ ಮತ್ತು ಲಿಂಗಸ್ಗೂರು ರಸ್ತೆ ಸುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.
ಮಹಿಳೆ ಕೊಲೆ
ಹುಣಸಗಿ: ಸಮೀಪದ ಕನಗಂಡನಹಳ್ಳಿ ತಾಂಡಾದಲ್ಲಿ ಮಹಿಳೆ ಕೊಲೆಯಾದ ಘಟನೆ ಬುಧವಾರ ತಿಳಿದಿದೆ.  ಕೊಲೆಯಾದ ಮಹಿಳೆ ಪಾಪಿಬಾಯಿ ಗಂಡ ಅಮರುನಾಯಕ ಪವಾರ (25) ಕನಗಂಡನಹಳ್ಳಿ ತಾಂಡಾದ ನಿವಾಸಿಯಾಗಿದ್ದು, ಗಂಡನ ಮನೆಯವರೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಕತ್ತು ಹಿಸುಕಿ ಬಾಯಿಯಲ್ಲಿ ವಿಷ ಹಾಕಿ ದಾರುಣವಾಗಿ ಕೊಲ್ಲಲಾಗಿದೆ ಎಂದು ಮೃತಳ ತಂದೆ ತಿಪ್ಪಣ್ಣ ರಾಠೋಡ ಹುಣಸಗಿ ಠಾಣೆಯಲ್ಲಿ ದೂರು ನೀಡಿದ್ದಾನೆ.   6 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಹೊಸ ಪಠ್ಯಪುಸ್ತಕ ವಿಭಜನೆ ಕಾರ್ಯಾಗಾರ
ಮುದಗಲ್: ಸಮೀಪದ ಹಲಕಾವಟಗಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಲಿಂಗಸ್ಗೂರು, ತಾಲೂಕು ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆ, ಲಿಂಗಸ್ಗೂರು ಹಾಗೂ ಸರ್ಕಾರಿ ಪ್ರೌಢಶಾಲೆ ಹಲಕಾವಟಗಿ ಇವರ ಸಂಯುಕ್ತ ಆಶ್ರಯದಲ್ಲಿ ಹಲಕಾವಟಗಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಒಂಬತ್ತನೇ ತರಗತಿ ಕನ್ನಡ ಪಠ್ಯಪುಸ್ತಕದ ಪಠ್ಯ ವಿಭಜನೆ ಕಾರ್ಯಾಗಾರ ನಡೆಯಿತು.
ಕವಿತಾಳ ಜೂನಿಯರ್ ಕಾಲೇಜಿನ ಪ್ರಾಧ್ಯಾಪಕ ಶಿವಶಂಕರ ಸೊಪ್ಪಿಮಠ, ಮಾನವಿ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಶಂಕರಗೌಡ ಬಲ್ಲಟಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಮುಖ್ಯಗುರು ವೈ.ಎ. ಚೂರಿ ವಹಿಸಿದ್ದರು. ಕೃಷ್ಣಪ್ಪ ಅಂಕುಶದೊಡ್ಡಿ ಉದ್ಘಾಟಿಸಿದರು. ಎಸ್‌ಡಿಎಂಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಆರ್. ಕಂಬಿ ಸ್ವಾಗತಿಸಿದರು. ಎಸ್.ಎ. ದೊಡ್ಡಮನಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement