21ರಿಂದ ಶ್ರೀರಾಯರ ಆರಾಧನಾ ಮಹೋತ್ಸವ
ರಾಯಚೂರು: ಇಲ್ಲಿನ ಜವಾಹರ ನಗರದಲ್ಲಿರುವ ಮಠದಲ್ಲಿ ರಾಘವೇಂದ್ರಸ್ವಾಮಿಗಳ 342ನೇ ಆರಾಧನಾ ಮಹೋತ್ಸವನ್ನು ಆ.21 ರಿಂದ 23ರವರೆಗೆ ಆಯೋಜಿಸಲಾಗಿದೆ.
ಆರಾಧನಾ ಮಹೋತ್ಸವದ ಅಂಗವಾಗಿ ಆ.20ರಂದು ಬೆಳಗ್ಗೆ 7ಕ್ಕೆ ಋಗ್ವೇದ, ಯಜುರ್ವೇದ ನಿತ್ಯ ನೂತನ ಉಪಾಕರ್ಮ ಅದೇ ದಿನ ಸಂಜೆ 5ಕ್ಕೆ ಉಡುಪಿಯ ಫಲಿಮಾರು ಮಠದ ವಿದ್ಯಾಧೀಶತೀರ್ಥರಿಂದ ಧ್ವಜಾರೋಹಣ, ಗೋಪೂಜೆ, ಶಾಖೋತ್ಸವ, ಪ್ರಾರ್ಥನೋತ್ಸವ, ರಥೋತ್ಸವ ಹಾಗೂ ಮಹಾಮಂಗಳಾರತಿ ನೆರವೇರಲಿದೆ.
ಆ.21ರಂದು ಶ್ರೀರಾಯರ ಪೂರ್ವಾರಾಧನೆ ಹಾಗೂ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಅದೇ ದಿನ ಸಂಜೆ 8ಕ್ಕೆ ಗುಲ್ಬರ್ಗದ ವಿದ್ಯಾಧೀಶ ಆದ್ಯಾ ಅವರಿಂದ ದಾಸವಾಣಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆ.22ರಂದು ರಾಯರ ಮಧ್ಯಾರಾಧನೆ ಅಂಗವಾಗಿ ವಿಶೇಷ ಪೂಜೆ ಅಲಂಕಾರ ಮತ್ತು ಸಂಜೆ 8ಕ್ಕೆ ಹುಬ್ಬಳ್ಳಿಯ ಯಮುನಾ ರಾಘವೇಂದ್ರ ಬೆಳಗಲಿ ಅವರಿಂದ ದಾಸವಾಣಿ ನಡೆಯಲಿದೆ.
ಆ.23 ರಂದು ರಾಘವೇಂದ್ರ ತೀರ್ಥರ ಉತ್ತರರಾಧನೆ ಸಂದರ್ಭ ಮಹಾರಥೋತ್ಸವ ಬೆಳಿಗ್ಗೆ 9.30ಕ್ಕೆ ನಡೆಯಲಿದೆ. ಅದೇ ದಿನ ಸಂಜೆ 7ಕ್ಕೆ ಬೆಂಗಳೂರು ಅರ್ಚನಾ ಕುಲಕರ್ಣಿ ದಾಸವಾಣಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಆರಾಧನಾ ಮಹೋತ್ಸವದ ಅಂಗವಾಗಿ ಆ.18ರಿಂದ 24ರವರೆಗೆ ರಾಯಚೂರಿನ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಂದ ದಿನವೂ ಬೆಳಿಗ್ಗೆ 7ಕ್ಕೆ ಅಷ್ಟೋತ್ತರ ಪಾರಾಯಣ ನಡೆಯಲಿದೆ ಎಂದು ಮಠ ತಿಳಿಸಿದೆ.