ತುಂಗಭದ್ರಾ ಎಡದಂಡೆ ನಾಲೆ ನೀರಿನ ಪೋಲು ತಡೆಗೆ ಕ್ರಮ
ರಾಯಚೂರು: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ರಾಯಚೂರು ಮತ್ತು ಕೊಪ್ಪಳ ಜಿಲ್ಲಾಡಳಿತಗಳು ಮುಂದಾಗಿದ್ದು, ನೀರಿನ ಹಂಚಿಕೆ ವಿಚಾರದಲ್ಲಿ ಬಿಗಿ ಕ್ರಮಗಳನ್ನು ಜರುಗಿಸಲು ನಿರ್ಧರಿಸಲಾಗಿದೆ. ಆ ಮೂಲಕ ಎಲ್ಲ ರೈತರಿಗೂ ಸಮರ್ಪಕ ನೀರೊದಗಿಸುವುದು ಹಾಗೂ ನೀರಿನ ಪೋಲು ತಡೆಯುವ ಪ್ರಯತ್ನಕ್ಕೆ ಚಾಲನೆ ಸಿಕ್ಕಂತಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆಯ ಕಡೆಯ ಭಾಗದಲ್ಲಿ ನೀರಿನ ತೀವ್ರ ಅಭಾವ ಉಂಟಾಗಿರುವಾಗಲೇ ಮೇಲ್ಭಾಗದ ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕುಗಳ ರೈತರ ಮಧ್ಯೆ ಸಂಘರ್ಷ ಏರ್ಪಟ್ಟಿತ್ತು. ಅದರಿಂದ ಕಾಲುವೆಯ ಕೆಲವೆಡೆ ರೈತರು ಕಾನೂನು ಉಲ್ಲಂಘಿಸಿ ನೀರು ಪಡೆದಿದ್ದರು.
ರಾಯಚೂರು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹಾಗೂ ಎಸ್ಪಿ ಎಸ್.ಬಿ. ಬಿಸನಳ್ಳಿ ಕೊಪ್ಪಳ ಜಿಲ್ಲೆಯ ಡಿಸಿ ಹಾಗೂ ಅಲ್ಲಿನ ಎಸ್ಪಿಯೊಂದಿಗೆ ಚರ್ಚಿಸಿದ್ದು, ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಾಲುವೆಯಲ್ಲಿ ನೀರಿನ ಮಟ್ಟ ಕಾಯ್ದುಕೊಲ್ಳಲು ಸೂಚಿಸಿದ್ದಾರೆ.