ಶಾಂತಿ, ನೆಮ್ಮದಿಗೆ ಪುರಾಣಗಳು ಅವಶ್ಯ
ಸಿಂಧನೂರು: ಇಂದಿನ ವೈಜ್ಞಾನಿಕ ಯುಗದಲ್ಲಿ ಅನೇಕ ಒತ್ತಡಗಳಿಂದ ಮನುಷ್ಯ ದುಶ್ಚಟಗಳ ದಾಸನಾಗುತ್ತಿದ್ದು, ಅದರಿಂದ ಹೊರಬಂದು ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಶರಣರ ಪುರಾಣಗಳನ್ನು ಕೇಳುವುದು ಅವಶ್ಯ ಎಂದು ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ನಗರದ ಕೋಟೆ ವೀರೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ 5ನೇ ವರ್ಷದ ಪುರಾಣ ಮಹೋತ್ಸವದ ಅಂಗವಾಗಿ ವಳಬಳ್ಳಾರಿ ಚನ್ನಬಸವೇಶ್ವರ ಪುರಾಣ ಪ್ರವಚನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶರಣರ ಆದರ್ಶ ಪಾಲಿಸಿ: ಚನ್ನಬಸವ ಶಿವಯೋಗಿಗಳು ಮಹಾ ತಪಸ್ವಿಯಾಗಿದ್ದು ಅವರು ದಾಸೋಹ ಸೇವೆ, ನುಡಿದಂತೆ ನಡೆದ ಶರಣರಲ್ಲಿ ಒಬ್ಬರಾಗಿದ್ದಾರೆ. ಮನುಷ್ಯನ ಮನಸ್ಸು ಶುದ್ಧವಾಗಬೇಕಾದರೆ ದಾಸೋಹ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು.
ಹಾಗೆಯೇ ಶರಣರ ಆದರ್ಶಗಳನ್ನು ತಪ್ಪದೇ ಪಾಲಿಸಬೇಕೆಂದು ಕಿವಿಮಾತು ಹೇಳಿದರು.
ಕರಿಬಸವನಗರದ ಸೋಮನಾಥ ಸ್ವಾಮೀಜಿ ಮಾತನಾಡಿದರು.
ಎಪಿಎಂಸಿ ರಾಜ್ಯ ಮಾಜಿ ಉಪಾಧ್ಯಕ್ಷ ರಾಜಶೇಖರ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರಸಭೆ ಮಾಜಿ ಸದಸ್ಯ ಹಾಗೂ ಕೋಟೆ ವೀರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬೆನ್ನೂರು ಶರಣೇಗೌಡ, ಬಸವರಾಜ ಶಾಸ್ತ್ರಿ, ಚಂದ್ರಶೇಖರ ಸ್ವಾಮಿ, ಅಮರಯ್ಯಸ್ವಾಮಿ ಅಲಬನೂರು ಹಾಗೂ ಕೋಟೆಯ ಗೆಳೆಯರ ಬಳಗದ ಸದಸ್ಯರು, ನೂರಾರು ಸುಮಂಗಲೆಯರು ಭಾಗವಹಿಸಿದ್ದರು.
ಪ್ರವಚನಕಾರ ಜಿ.ಎಂ. ಸಿದ್ದರಾಮಯ್ಯ ಶಾಸ್ತ್ರಿ ಕಂಪನಿ ಸಂಗೀತ ವಾದಕ ಎನ್.ಎಂ.ಜಗದೀಶ, ತಬಲಾ ವಾದಕ ಬಸವರಾಜ ಮೋತಿ, ಎಚ್.ಎಂ. ಶಾಂತವೀರಯ್ಯಸ್ವಾಮಿ ಪ್ರವಚನ ಕಾರ್ಯಕ್ರಮವನ್ನುನಡೆಸಿಕೊಟ್ಟರು.