ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸೈದಾಪುರದಲ್ಲಿ ಸರಣಿ ಅಂಗಡಿ ಕಳ್ಳತನ

Vishwanath S
Updated On : 9 Aug 2013, 11:53 am

ಯಾದಗಿರಿ: ತಾಲೂಕಿನ ಸೈದಾಪುರ ಗ್ರಾಮದಲ್ಲಿ ಬುಧವಾರ ತಡರಾತ್ರಿ ಸರಣಿ ಅಂಗಡಿ ಕಳ್ಳತನ ನಡೆದಿರುವ ಘಟನೆ ನಡೆದಿದೆ.
ಗ್ರಾಮದ ರಾಯಚೂರು ರಸ್ತೆಯಲ್ಲಿರುವ ಎಂಎಸ್‌ಐಎಲ್ ಮದ್ಯದ ಅಂಗಡಿ, ಫರ್ಟಿಲೈಜರ್, ಸಿಮೆಂಟ್ ಹಾಗೂ ಭವಾನಿ ಎಲೆಕ್ಟ್ರಿಕಲ್ ಅಂಗಡಿ, ಮತ್ತೊಂದು ಅಂಗಡಿ ಸೇರಿದಂತೆ 5 ಅಂಗಡಿಗಳ ಶೆಟರ್‌ಗಳನ್ನು ರಾಡ್‌ನಿಂದ ಮುರಿದು ಲಕ್ಷಾಂತರ ರುಪಾಯಿ ನಗದು ಸೇರಿದಂತೆ ವಸ್ತುಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.
ಗುರುವಾರ ಬೆಳಗಿನ ಜಾವ ಮಾಲೀಕರು ಅಂಗಡಿ ತೆರೆಯಲು ಬಂದಾಗ ಘಟನೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಕೂಡ ಸೈದಾಪುರ ಗ್ರಾಮದಲ್ಲಿ ಸರಣಿ ಅಂಗಡಿ ಕಳ್ಳತನ ನಡೆದಿದ್ದವು. ಆದರೆ ಯಾವೊಂದು ಪ್ರಕರಣಗಳ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿಲ್ಲ. ಪದೇ ಪದೇ ಸರಣಿ ಅಂಗಡಿ ಕಳ್ಳತನ ಆಗುತ್ತಿರುವುದರ ಹಿಂದೆ ವ್ಯಾಪಕವಾದ ಜಾಲವಿದೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಡವರಿಗೆ ಆಹಾರ ಕಿಟ್ ವಿತರಣೆ
ಮುದಗಲ್: ಸ್ಥಳೀಯ ಜಮಾತೆ ಇಸ್ಲಾಮಿಕ್ ಸಮಿತಿ ಹಾಗೂ ನೂರ್ ಅಲಿ ಮಸೀದಿ ಕಮಿಟಿಯಿಂದ ಮುಸ್ಲಿಂ ಜನಾಂಗದ ಬಡವರಿಗೆ ರಂಜಾನ್ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ 25 ಬಡ ಕುಟುಂಬಗಳಿಗೆ ತಲಾ 400 ಬೆಲೆ ಬಾಳುವ ಆಹಾರ ಕಿಟ್‌ಗಳನ್ನು ನೀಡಲಾಯಿತು. ಕಮಿಟಿ ಅಧ್ಯಕ್ಷ ದಾವೂದ್‌ಸಾಬ್ ಕೋರಿ, ನೂರ್ ಅಲಿ ಮಸೀದ್ ಕಮಿಟಿ ಅಧ್ಯಕ್ಷ ಶಬ್ಬಿರಖಾನಸಾಬ್, ಮುಖಂಡರಾದ ಆದಮಸಾಬ್, ಅಕ್ಬರ್, ಮಹ್ಮದ್ ಹುಸೇನ್, ಮೋಹಿನುದ್ದೀನ್ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು. ಸುಮಾರು 10 ಸಾವಿರ ಬೆಲೆಯ ರಂಜಾನ್ ಪ್ರಾಜೆಕ್ಟನ್ನು ನೀಡಲಾಯಿತು.

ನಾಟಕಗಳಿಂದ ಮಾನಸಿಕ, ದೈಹಿಕ ಸದೃಢತೆ
ಹುಣಸಗಿ: ಪಟ್ಟಣದ ಯುಕೆಪಿ ಕ್ಯಾಂಪಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ಶಿಕ್ಷಕರಿಗಾಗಿ ಭಾಷಾ ವಿಷಯದಲ್ಲಿ ನಾಟಕದ ಪಾತ್ರದ ಕುರಿತು ತರಬೇತಿ ಕಾರ್ಯಕ್ರಮ ಎರಡು ದಿನ ನಡೆಯಿತು.  ಬೆಂಗಳೂರಿನ ಸಂಪನ್ಮೂಲ ವ್ಯಕ್ತಿ ಕೆ.ಆರ್. ಉಪೇಂದ್ರ ಮಾತನಾಡಿ, ಗದ್ಯವನ್ನು ನಾಟಕದ ಮೂಲಕ ಹಾವ-ಭಾವದೊಂದಿಗೆ ನಟಿಸಿ ತೋರಿಸಿದಾಗ ವಿದ್ಯಾರ್ಥಿಗಳ ಮನದಲ್ಲಿ ಹೆಚ್ಚೆಚ್ಚು ವಿಷಯಗಳನ್ನು ಉಳಿಸಿಕೊಳ್ಳಬಹುದಾಗಿದೆ. ಮಕ್ಕಳ ಮುಖಾಂತರ ಇಂತಹ ಕಲಿಕೆಗಳನ್ನು ಮಾಡಿಸುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗುತ್ತಾರೆ. 7 ರಸಗಳ ಬಗ್ಗೆ ವಿವರಿಸಿದರು. ಪ್ರತಿಯೊಬ್ಬ ಶಿಕ್ಷಕರಿಗೂ ಚಟುವಟಿಕೆ ಮಾಡಿಸಿ, ಶಿಕ್ಷಕರ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಹುಣಸಗಿಯಲ್ಲಿ ಬರುವ 4 ಕ್ಲಸ್ಟರ್‌ಗಳಲ್ಲಿ ಆಯ್ದ ಶಿಕ್ಷಕರಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಿಕ್ಷಕರಿಗಾಗಿ 4 ಗುಂಪುಗಳನ್ನು ರಚಿಸಿ, ತಲಾ ಒಂದು ಗುಂಪಿನವರು ಒಂದೊಂದು ನಾಟಕವನ್ನು ಪ್ರದರ್ಶಿಸಿದರು. ಹುಣಸಗಿ ಕಲಿಕಾ ಕೇಂದ್ರದ ಸಂಪನ್ಮೂಲ ವ್ಯಕ್ತಿ ಡಿ. ರಾಧಾ ಸ್ವಾಗತಿಸಿ ವಂದಿಸಿದರು.

ವೀರಭದ್ರೇಶ್ವರ  ಮೂರ್ತಿ 12ರಂದು ಪ್ರತಿಷ್ಠಾಪನೆ
ಸುರಪುರ: ತಾಲೂಕಿನ ಸೂಗೂರು ಗ್ರಾಮದಲ್ಲಿ ದಿ.12 ರಂದು ವೀರಭದ್ರೇಶ್ವರ, ಗ್ರಾಮ ದೇವತೆ ಮೂರ್ತಿ ಪ್ರತಿಷ್ಟಾಪನೆ ಮತ್ತು ವೀರಭದ್ರೇಶ್ವರ ದೇವಸ್ಥಾನದ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ. ಶಾಸಕ ರಾಜಾ ವೆಂಕಟಪ್ಪನಾಯಕ, ಸಂಸದ ಎಸ್. ಫಕೀರಪ್ಪ, ಮಾಜಿ ಸಚಿವ ರಾಜಾ ಮದನಗೋಪಾಲನಾಯಕ, ಮಾಜಿ ಸಂಸದ ರಾಜಾ ರಂಗಪ್ಪನಾಯಕ ಭಾಗವಹಿಸಲಿದ್ದಾರೆಂದು ಗ್ರಾಮದ ಬಸವರಾಜ ನಾಯಕ, ದೇವಿಂದ್ರಪ್ಪ ದೇಸಾಯಿ, ಸಕ್ರೇಪ್ಪ ಕಮತಗಿ, ರಾಮಚಂದ್ರರಾವ ಕುಲಕಣರ್, ಶಂಕ್ರಪ್ಪ ದೇಸಾಯಿ, ಈರಣ್ಣ ಭೂಮಶೆಟ್ಟಿ, ದೇವೆಂದ್ರಪ್ಪ ತೋಟದ ತಿಳಿಸಿದ್ದಾರೆ.

ಅತಿಥಿ ಉಪನ್ಯಾಸಕ ಸಂಘಕ್ಕೆ ಆಯ್ಕೆ
ಸುರಪುರ: ಇಲ್ಲಿಯ ಅತಿಥಿ ಉಪನ್ಯಾಸಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಗುರುರಾಜ ಕುಲಕರ್ಣಿ (ಅಧ್ಯಕ್ಷ), ಅಶೋಕ ಜಾಧವ್(ಉಪಾಧ್ಯಕ್ಷ), ದೇವು ಹೆಬ್ಬಾಳ (ಕಾರ್ಯದರ್ಶಿ), ಹಂಪಮ್ಮ ಎಸ್ಕೆ(ಸಹ ಕಾರ್ಯದರ್ಶಿ), ಜಗದೇವ ಪತ್ತಾರ(ಸಂಘಟನಾ ಕಾರ್ಯದರ್ಶಿ), ಪಾರ್ವತಿ ಬಾಪುಗೌಡ(ಮಹಿಳಾ ಪ್ರತಿನಿಧಿ), ಗುಂಡಪ್ಪನಾಯಕ(ಖಜಾಂಚಿ).

ಕಲ್ಮಾಲ, ಉರುಕುಂದಾಕ್ಕೆ ಬಸ್ ಸೌಲಭ್ಯ
ರಾಯಚೂರು: ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ಕಲ್ಮಲಾ ಮತ್ತು ಆಂಧ್ರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉರುಕುಂದಾದ ಈರಣ್ಣಸ್ವಾಮಿ ದರ್ಶನಕ್ಕೆ ತೆರಳುವ ಭಕ್ತರಿಗೆ ಸಾರಿಗೆ ಸಂಸ್ಥೆಯು ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯು ಆ.10ರಿಂದ ಸೆ.10ರವರೆಗೆ ಕಲ್ಮಲಾ ಮತ್ತು ಉರುಕುಂದಾ ಗ್ರಾಮಗಳಿಗೆ ತೆರಳಲು ಭಕ್ತರಿಗೆ ವಿಶೇಷ ಬಸ್ ಓಡಿಸಲಿದೆ. ರಾಯಚೂರು-ಕಲ್ಮಾಲ-ಸಿರವಾರ, ರಾಯಚೂರು-ಗಬ್ಬೂರು-ದೇವದುರ್ಗ, ರಾಯಚೂರು-ಗಿಲ್ಲೆಸೂಗೂರು-ಉರುಕುಂದಾ, ಸಿಂಧನೂರು-ಸಿರುಗುಪ್ಪ-ಉರುಕುಂದಾ ಮಾರ್ಗದಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದೆ. ಯಾವುದೇ ಗ್ರಾಮದಿಂದ 50 ಜನ ಕಲ್ಮಾಲ ಇಲ್ಲವೇ ಉರುಕುಂದಾಕ್ಕೆ ತೆರಳಲು ಬಯಸಿದಲ್ಲಿ ಅಂಥ ಗ್ರಾಮದಿಂದಲೇ ಬಸ್ ಓಡಿಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಸಮೀಪದ ಬಸ್ ಘಟಕದ ಅಧಿಕಾರಿಗಳನ್ನು ಸಂಪರ್ಕಿಸಲು ಮನವಿಯನ್ನುಮಾಡಿದ್ದಾರೆ.

ವಿಕಲಚೇತನರ ಪಾಸ್ ದರ ಪರಿಷ್ಕರಣೆ
ರಾಯಚೂರು: ರಾಜ್ಯ ಸರ್ಕಾರವು ವಿಕಲಚೇತನರ ಬಸ್ ಪ್ರಯಾಣದ ಪಾಸ್ ದರವನ್ನು ಪರಿಷ್ಕರಿಸಿದ್ದು, ಆ.2ರಿಂದ ಈ ನೂತನ ದರ ಜಾರಿಗೆ ಬರಲಿದೆ ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ಪ್ರಕಟಣೆ ತಿಳಿಸಿದೆ. ವಿಕಲಚೇತನರ ಬಸ್‌ಪಾಸ್ ದರವು ಆ. 2ರಿಂದ 660 ಗೆ ನಿಗದಿ ಮಾಡಿದ್ದು, ಇದುವರೆಗೆ ಬಸ್‌ಪಾಸ್ ಫಲಾನುಭವಿಗಳ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಸೀಮಿತಗೊಳಿಸಲಾಗಿತ್ತು. ಆದರೆ ಈ ಮಿತಿಯನ್ನು ತೆಗೆದು ಹಾಕಲಾಗಿದೆ. ಸದ್ಯ ಗರಿಷ್ಟ ಮಿತಿಯಿಲ್ಲದೇ ಎಲ್ಲ ವಿಕಲಚೇತನರಿಗೆ ಬಸ್‌ಪಾಸ್ ನೀಡಲು ಸರ್ಕಾರ ಸೂಚಿಸಿದೆ ಎಂದು ತಿಳಿಸಿದೆ. ಬಸ್‌ಪಾಸ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನೂ ಸರಳಗೊಳಿಸಿದ್ದು, ವಿಕಲಚೇತನರು ನೇರವಾಗಿ ಇನ್ನು ಮುಂದೆ ಸಾರಿಗೆ ಸಂಸ್ಥೆಗೆ ಅರ್ಜಿ ಸಲ್ಲಿಸಿ ಬಸ್‌ಪಾಸ್‌ಗೆ ಮನವಿ ಮಾಡಿದಲ್ಲಿ ಸಂಸ್ಥೆ ಅಂಥ ಅರ್ಜಿಗಳನ್ನು ಪರಿಶೀಲಿಸಿ ಬಸ್‌ಪಾಸ್ ಮಂಜೂರು ಮಾಡಲಿದೆ ಎಂದು ತಿಳಿಸಲಾಗಿದೆ.

'ಸವಲತ್ತು ಸದ್ಬಳಕೆಯಾಗಲಿ'
ಲಿಂಗಸ್ಗೂರು: ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಜಾರಿಗೆ ತಂದ ವಿವಿಧ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲ್ ಕರೆ ನೀಡಿದರು.
ಪಟ್ಟಣದ ಗುರುಭವನದಲ್ಲಿ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹಲೋ ಮಿತ್ರ ಮತ್ತು ವೈದ್ಯ ಬಾಂಧವ ಪತ್ರಿಕೆ ಸಂಯುಕ್ತಾಶ್ರಯದಲ್ಲಿ ಗುರುವಾರ ಜರುಗಿದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ, ರಾಜಕಾರಣಿಗಳು ಮಾಡುವ ಯಾವುದೇ ಕಾರ್ಯಕ್ರಮದ ಹಿಂದೆ ಒಂದು ಉದ್ದೇಶ ಇರುತ್ತದೆ. ಆದರೆ ಸಂಘ-ಸಂಸ್ಥೆಗಳಿಂದ ಜರುಗುವ ಕಾರ್ಯಕ್ರಮಗಳ ಹಿಂದೆ ಸಾಮಾಜಿಕ ಕಳಕಳಿ ಅಡಗಿರುತ್ತದೆ ಎಂದರು.
ಸಮಾರಂಭವನ್ನು ಹುನಕುಂಟಿ ಶರಣಯ್ಯ ಶ್ರೀಗಳು ಉದ್ಘಾಟಿಸಿದರು. ಪುರಸಭೆ ಸದಸ್ಯ ಶರಣಗೌಡ ಮಾಲಿ ಪಾಟೀಲ್, ಮುಖ್ಯಗುರು ಶ್ಯಾಮಲಾ, ಅಕ್ಷರ ದಾಸೋಹ ಅಧಿಕಾರಿ ಮುರಳಿಧರ ಕುಲ್ಕರ್ಣಿ, ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಾಮೀದ್ ಅಲಿ, ಎಸ್‌ಡಿಎಂಸಿ ಅಧ್ಯಕ್ಷ ಹಾಜಿಸಾಬ, ಪಿಂಜಾರ ಸಂಘದ ಅಧ್ಯಕ್ಷ ಖಾದರ್‌ಸಾಬ್ ಆನೆಹೊಸೂರು ಇದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು. ನಂತರ ಸರ್ಕಾರಿ ಶಾಲೆ ಬಡ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.

ಇಂದು ಜಿಲ್ಲಾವಿಶ್ವಕರ್ಮರ ಸಭೆ
ರಾಯಚೂರು: ನಗರದ ಬೇರೂನ್ ಕಿಲ್ಲಾ ಪ್ರದೇಶದಲ್ಲಿರುವ ಶ್ರೀಕಾಳಿಕಾ ದೇವಸ್ಥಾನದಲ್ಲಿ ಜಿಲ್ಲಾ ವಿಶ್ವಕರ್ಮ ಸಮಾಜದ ಪ್ರಮುಖ ಸಭೆಯನ್ನು ಆ.9ರಂದು ಕರೆಯಲಾಗಿದೆ. ಬೆಳಗ್ಗೆ 11ಕ್ಕೆ ದೇವಸ್ಥಾನದಲ್ಲಿ ಸಭೆ ನಡೆಯಲಿದ್ದು, ಸಮಾಜದ ಸಂಘಟನೆ ಬಲಪಡಿಸುವುದು, ನೂತನ ಪದಾಧಿಕಾರಿಗಳ ಆಯ್ಕೆ ಸೇರಿದಂತೆ ವಿವಿಧ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತಿದ್ದು, ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ವಿಶ್ವಕರ್ಮ ಸಮಾಜದ ಹಂಗಾಮಿ ಅಧ್ಯಕ್ಷ ಮನೋಹರ್ ಪತ್ತಾರ್ ತಿಳಿಸಿದ್ದಾರೆ.

ವಿಶೇಷ ಉಪನ್ಯಾಸ ಕಾರ್ಯಕ್ರಮ ಯಶಸ್ವಿ
ರಾಯಚೂರು: ನಗರದ ಪೊಲೀಸ್ ಕಾಲನಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಎನ್‌ಎಸ್‌ಎಸ್ ಘಟಕದಿಂದ ಮಕ್ಕಳ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ಎಂಬ ವಿಷಯದ ಕುರಿತು ಉಪನ್ಯಾಸ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸವನ್ನು ಗುರುಸ್ವಾಮಿ ಹಿರೇಮಠ ನೀಡಿದರು. ಅಧ್ಯಕ್ಷತೆಯನ್ನು ಉಪನ್ಯಾಸಕ ಲಕ್ಷ್ಮಿಕಾಂತ ರೆಡ್ಡಿ ವಹಿಸಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಅನಂತ ಪದ್ಮನಾಭ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಚಂದ್ರಶೇಖರ್, ಎನ್‌ಎಸ್‌ಎಸ್ ಅಧಿಕಾರಿ ಮಂಜುನಾಥ್ ಸೇರಿ ಅನೇಕರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಸಮಾರಂಭದಲ್ಲಿದ್ದರು.

ಡಿಕ್ಕಿ: ಗ್ರಾಪಂ  ಸದಸ್ಯನ ಸಾವು
ರಾಯಚೂರು: ಮಾನವಿ ತಾಲೂಕಿನ ನೀರಮಾನವಿ ಗ್ರಾಪಂ ಸದಸ್ಯರೊಬ್ಬರು ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಗುರುವಾರ ಬೆಳಗ್ಗೆ ಸಾವಿಗೀಡಾಗಿದ್ದಾರೆ. ಮೃತರನ್ನು ನೀರಮಾನವಿ ಗ್ರಾಪಂ ಸದಸ್ಯ ಚಂದ್ರಶೇಖರ್(38) ಎಂದು ಗುರುತಿಸಲಾಗಿದೆ. ಇವರು ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳಿದ್ದು ಮನೆಗೆ ಮರಳುತ್ತಿದ್ದ ವೇಳೆ ಮಾರ್ಗದಲ್ಲಿ ಹಿಂದಿನಿಂದ  ವೇಗವಾಗಿ ಬಂದ ಅಪರಿಚಿತ ವಾಹನವು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದರಿಂದ ಚಂದ್ರಶೇಖರ್ ಸ್ಥಳದಲ್ಲಿಯೇ ಮೃತರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement