ಅವ್ಯವಹಾರ ಆರೋಪ; ತನಿಖೆಗೆ ಒತ್ತಾಯ
ಸಿಂಧನೂರು: ತಾಲೂಕಿನ ಸಾಲಗುಂದಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಕೊಠಡಿಗೆ ಹಣ ಮಂಜೂರಾಗಿದ್ದು, ಆ ಹಣವನ್ನು ಎಸ್‌ಡಿಎಂಸಿ ಅಧ್ಯಕ್ಷ ಮತ್ತು ಮುಖ್ಯೋಪಾಧ್ಯಾಯರು ದುರ್ಬಳಕೆ ಮಾಡಿಕೊಂಡಿದ್ದು ಸೂಕ್ತ ತನಿಖೆ ನಡೆಸಿ ಹಣ ವಸೂಲಿ ಮಾಡುವಂತೆ ಅಖಿಲ ಕರ್ನಾಟಕ ಅಂಬೇಡ್ಕರ್ ಮಹಾಸಭಾ ಅಲ್ಪಸಂಖ್ಯಾತ ಹಿಂದುಳಿದ ದಲಿತ ರಾಜ್ಯ ಸಮಿತಿ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮಿತಿಯ ತಾಲೂಕಾಧ್ಯಕ್ಷ ಹುಲಗಪ್ಪ ಮ್ಯಾಗಳಮನಿ, ಗ್ರಾಮ ಘಟಕದ ಅಧ್ಯಕ್ಷ ನಾಗರಾಜ, ಗೌರವಾಧ್ಯಕ್ಷ ಹುಸೇನಪ್ಪ ಗಿಣಿವಾರ ಅವರು ಬಿಸಿಯೂಟದ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದು, ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷ ಈ ಕಡತವನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ. ಈವರೆಗೆ ನೇಮಕಗೊಂಡವರಿಗೆ ಕೆಲಸಕ್ಕೆ ಹಾಜರುಪಡಿಸಿಲ್ಲ.
ಶಾಲೆಯಲ್ಲಿ 83 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು ಕೇವಲ ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಸಿಯೂಟದ ಸಿಬ್ಬಂದಿ ಇಲ್ಲದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಬಿಸಿಯೂಟವಿಲ್ಲದೆ ಸರ್ಕಾರದ ಯೋಜನೆಯಿಂದ ಇಲ್ಲಿಯ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಶೀಘ್ರ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಆ.16ರಂದು ತಾಪಂ ಕಾರ್ಯಾಲಯದ ಮುಂಭಾಗದಲ್ಲಿ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.