'ನ್ಯಾಯಬೆಲೆ ಅಂಗಡಿ ಸಂಚಾಲಕರಿಗೆ ಬುದ್ಧಿ ಹೇಳಿ'
ಸಿಂಧನೂರು: ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಒಂದು ರೂ.ಗೆ ಕೆ.ಜಿ. ಅಕ್ಕಿ ವಿತರಣೆ ಮಾಡಲು ಸರ್ಕಾರ ಆದೇಶ ಮಾಡಿದ್ದರೂ ಅದನ್ನು ಜಾರಿಗೆ ತರದೆ ನ್ಯಾಯಬೆಲೆ ಅಂಗಡಿ ಸಂಚಾಲಕರು ಒಂದು ಕೆ.ಜಿ. ಅಕ್ಕಿಗೆ ಒಂದುವರೆ ರೂಪಾಯಿಯಂತೆ ತೆಗೆದುಕೊಳ್ಳುತ್ತಿದ್ದಾರೆ.
ಪ್ರತಿಯೊಂದು ಕಾರ್ಡ್‌ಗೆ ಕೇವಲ 25 ಕೆ.ಜಿ. ವಿತರಣೆ ಮಾಡುತ್ತಿದ್ದಾರೆ. ಉದಾಹರಣೆಗೆ ಬೂದಿವಾಳ, ದಢೇಸುಗೂರು, ಗಾಂಧಿನಗರ, ಸಿಎಸ್‌ಎಫ್ ಕ್ಯಾಂಪ್ ನಂ.1 ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಮತ್ತು ಕ್ಯಾಂಪುಗಳಲ್ಲಿ ರಾಜಾರೋಷವಾಗಿ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ತಹಸೀಲ್ದಾರರು ಸೂಕ್ತ ಕ್ರಮಕೈಗೊಳ್ಳುವಂತೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಕಾರ್ಯದರ್ಶಿ ಆರೋಗ್ಯಪ್ಪ ಪನ್ನೂರು, ತಾಲೂಕು ಅಧ್ಯಕ್ಷ ಅಳ್ಳಪ್ಪ ಜರಕುಂಟಿ ಒತ್ತಾಯಿಸಿದ್ದಾರೆ.