ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬತ್ತ ನಾಟಿಗೆ ರೈತರ ಹಿಂದೇಟು

Vishwanath S
Updated On : 10 Aug 2013, 12:07 pm

ಕನ್ನಡಪ್ರಭ ವಾರ್ತೆ ,  ರಾಯಚೂರು ,  ಆ.9
ತುಂಗಭದ್ರಾ ಎಡದಂಡೆ ಕಾಲುವೆಯಿಂದ ಜಿಲ್ಲೆಯ ಕಡೆಯ ಭಾಗದ ರೈತರಿಗೆ ಸಮರ್ಪಕ ನೀರೊದಗಿಸುವ ಜಿಲ್ಲಾಡಳಿತದ ಪ್ರಯತ್ನ ಕೈಗೂಡಲು ವಿಳಂಬವಾಗಿದ್ದು, ರೈತರು ನೀರಿಗಾಗಿ ಕಾದು ಕುಳಿತುಕೊಳ್ಳುವಂತಾಗಿದೆ. ಕಾಲುವೆಯ ಮೇಲ್ಭಾಗದಲ್ಲಿನ ರೈತರು ಕೃಷಿಯಲ್ಲಿ ತೊಡಗಿದ್ದರೆ ಕಡೆಯ ಭಾಗದಲ್ಲಿ ರೈತರು ಬತ್ತದ ನಾಟಿಗೂ ಹಿಂದೇಟು ಹಾಕುವಂಥ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಕೆಲ ದಿನಗಳಿಂದ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಪಡೆಯುವ ವಿಚಾರವಾಗಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ರೈತರ ಮಧ್ಯೆ ಸಂಘರ್ಷ ಏರ್ಪಟ್ಟಿತ್ತು. ಅದನ್ನು ತಪ್ಪಿಸಿ ರೈತರಿಗೆ ಸಮರ್ಪಕ ನೀರೊದಗಿಸುವ ಕಾರ್ಯಕ್ಕೆ ರಾಯಚೂರು ಜಿಲ್ಲಾಡಳಿತ ಮುಂದಾಗಿತ್ತು.
ಅಧಿಕಾರಿಗಳಿಗೆ ಸೂಚಿಸಿದ್ದರು: ಅದರಂತೆಯೇ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹಾಗೂ ಎಸ್ಪಿ ಎಸ್.ಬಿ. ಬಿಸನಳ್ಳಿ ಅವರು, ಕಾಲುವೆಯ ಮೇಲೆ ಸಂಚರಿಸಿದ್ದಲ್ಲದೇ ಕೊಪ್ಪಳದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ನೀರಾವರಿ ಅಧಿಕಾರಿಗಳಿಗೂ ನೀರಿನ ನಿರ್ವಹಣೆಗೆ ಸಂಬಂಧಿಸಿ ಸೂಚನೆ ನೀಡಿದ್ದರು.
ಅದರಂತೆ ಗುರುವಾರ ಕಾಲುವೆಯ ಸಿಂಧನೂರು ತಾಲೂಕಿನ ತುರ್ವಿಹಾಳ ಬಳಿ 11.5 ಅಡಿಗೆ ನೀರಿನ ಮಟ್ಟ ತಲುಪಿತ್ತು. ಆದರೆ ಕಾಲುವೆಯ ಕಡೆಯಲ್ಲಿರುವ 104ನೇ ಕೆಳಭಾಗದ ಮಾನವಿ ಮತ್ತು ರಾಯಚೂರು ತಾಲೂಕಿನ ರೈತರಿಗೆ ನೀರು ಈಗಲೂ 3 ಅಡಿಗಿಂತ ಹೆಚ್ಚಳ ಕಂಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಕಾಲುವೆಯಲ್ಲಿ ಕೇವಲ ಮೂರಡಿ ನೀರು: ಈ ಬಗ್ಗೆ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ತುಂಗಭದ್ರಾ ಎಡದಂಡೆ 104ನೇ ಮೈಲ್ ಕೆಳಭಾಗದ ರೈತರ ಹೋರಾಟ ಸಮಿತಿ ಮುಖಂಡ ಸಿದ್ದನಗೌಡ, ಅಧಿಕಾರಿಗಳ ಪ್ರಯತ್ನದ ಹೊರತಾಗಿಯೂ ಇದುವರೆಗೆ ಕಾಲುವೆಯಲ್ಲಿ 3 ಅಡಿಗಿಂತ ಹೆಚ್ಚಿನ ನೀರು ಹರಿಯುತ್ತಿಲ್ಲ. ಇದರಿಂದಾಗಿ ರೈತರ ಗದ್ದೆಗಳಿಗೆ ನೀರು ತಲುಪುತ್ತಿಲ್ಲ ಎಂದು ದೂರಿದರು.
ಈಗಾಗಲೇ ತುಂಗಭದ್ರಾ ಎಡದಂಡೆ ಅಚ್ಚುಕಟ್ಟು ಪ್ರದೇಶದ ಕೊಪ್ಪಳ ಜಿಲ್ಲೆಯ ಗಂಗಾವತಿ ಹಾಗೂ ಸಿಂಧನೂರಿನ ಕೆಲ ಪ್ರದೇಶದಲ್ಲಿ ರೈತರು ಬತ್ತದ ನಾಟಿ ಪೂರೈಸಿದ್ದಾರೆ. ಆದರೆ ಕಾಲುವೆಯ ಕಡೆಯ ಭಾಗದಲ್ಲಿನ ರೈತರು ಬತ್ತದ ನಾಟಿ ಮಾಡಲು ನೀರಿನ ಅಭಾವ ಎದುರಾಗಲಿದೆಯೇ ಎಂಬ ಆತಂಕದಲ್ಲಿದ್ದಾರೆ.
ಆತಂಕದಲ್ಲಿ ರೈತರು: ಅನೇಕರು ಬತ್ತವನ್ನು ನಾಟಿ ಮಾಡಿದ್ದರೂ ಅವರಿಗೆ ವಾರಾಬಂದಿಯಂತೆ ಸಮರ್ಪಕ ನೀರಿಲ್ಲದೇ ಬೆಳೆ ಹಾನಿಯ ಭೀತಿಗೂ ಸಿಲುಕಿದ್ದಾರೆ. ಕಳೆದ ಎರಡು ವರ್ಷ ಭೀಕರ ಬರದಿಂದ ತತ್ತರಿಸಿರುವ ರೈತರು, ಈ ಬಾರಿಯಾದರೂ ಸಮರ್ಪಕ ಮಳೆಯಾಗಿದ್ದು, ಕಾಲುವೆಯಿಂದ ಸಮರ್ಪಕ ನೀರು ಪಡೆದು ಉತ್ತಮ ಫಸಲಿನ ನಿರೀಕ್ಷೆ ಹುಸಿಯಾಗುವ ಆತಂಕದಲ್ಲಿದ್ದಾರೆ.
ಕಳೆದ ಕೆಲ ದಿನಗಳಿಂದ ತುಂಗಭದ್ರಾ ನದಿಯಲ್ಲಿ ಉಂಟಾಗಿದ್ದ ಪ್ರವಾಹ ತಗ್ಗಿದೆ. ಜಲಾಶಯಕ್ಕೆ ಒಳಹರಿವು 53,640 ಕ್ಯುಸೆಕ್‌ಗೆ ಇಳಿದಿದೆ. ಹಾಗೆಯೇ ಹೊರಹರಿವನ್ನು 31,051 ಕ್ಯುಸೆಕ್‌ಗೆ ಇಳಿಕೆ ಮಾಡಲಾಗಿದೆ.
ಆಂಧ್ರಕ್ಕೆ ನೀರು: ನದಿ ಪಾತ್ರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಪ್ರವಾಹದಲ್ಲಿ ಇಳಿಕೆಯಾಗಿದ್ದರೂ ಆಂಧ್ರಕ್ಕೆ ನೀರು ಹರಿಯುವುದು ಮುಂದುವರಿದಿದೆ. ಆದರೆ ರಾಜ್ಯದ ಅದರಲ್ಲೂ ಕಾಲುವೆಯ ಕಡೆಯ ಭಾಗದ ರೈತರು ನೀರಿಗಾಗಿ ಕಾದು ಕುಳಿತುಕೊಳ್ಳುವಂತಾಗಿದೆ. ಅಗತ್ಯ ನೀರು ದೊರೆಯದೇ ಇಳುವರಿಯ ಕೊರತೆ ಎದುರಿಸುವಂಥ ಸ್ಥಿತಿ ನಿರ್ಮಾಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement