ಸ್ವಾತಂತ್ರ್ಯೋತ್ಸವ ಕ್ರೀಡಾಂಗಣದಲ್ಲೇ
ರಾಯಚೂರು: ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿಯೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಆಚರಿಸಲು ನಿರ್ಧರಿಸಿರುವ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಆರಂಭಿಸಿದೆ.
ಇತ್ತೀಚೆಗೆ ನಡೆದ ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಆ. 15ರಂದು ರಾಯಚೂರು ಕೃಷಿ ವಿವಿಯಲ್ಲಿ ಸ್ವಾತಂತ್ರೋತ್ಸವ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಜನತೆಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಜಿಲ್ಲಾ ಕ್ರೀಡಾಂಗಣದಲ್ಲಿಯೇ ಸ್ವಾತಂತ್ರ್ಯೋತ್ಸವ ಆಚರಿಸಲು ನಿರ್ಧರಿಸಿದ್ದು ಅದರಂತೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಶುಕ್ರವಾರ ಸಿದ್ಧತೆ ಕಾರ್ಯ ಪರಿಶೀಲಿಸಿದರು.
ಕ್ರೀಡಾಂಗಣದಲ್ಲಿ ಸಂಗ್ರಹವಾಗಿರುವ ನೀರು ಹೊರಹಾಕುವ ಕಾರ್ಯ ಪೂರ್ಣಗೊಂಡಿದ್ದು, ನೀರು ಸಂಗ್ರಹಗೊಂಡಿದ್ದ ಪ್ರದೇಶದಲ್ಲಿ ಮರಂ ಹಾಕಿ ಕ್ರೀಡಾಂಗಣವನ್ನು ಧ್ವಜಾರೋಹಣ ಮತ್ತು ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಜ್ಜುಗೊಳಿಸುವ ಕಾರ್ಯ ಶುಕ್ರವಾರ ಕೈಗೊಳ್ಳಲಾಯಿತು.