ಒಪೆಕ್ ವಿರೋಧಿ ನೀತಿಗೆ ಖಂಡನೆ: 15ರಂದು ಸಚಿವರಿಗೆ ಮುತ್ತಿಗೆ
ಕನ್ನಡಪ್ರಭ ವಾರ್ತೆ , ರಾಯಚೂರು , ಆ.10
ಒಪೆಕ್ ಆಸ್ಪತ್ರೆಯ ಪುನಾರಂಭ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದ್ದು, ಒಪೆಕ್ ಆರಂಭದ ಮೂಲಕ ರಿಮ್ಸ್ಗೆ ಉಂಟಾಗಿರುವ ಸಮಸ್ಯೆಗಳ ನಿವಾರಣೆ ಮಾಡಿಕೊಳ್ಳುತ್ತಿದೆ. ಸರ್ಕಾರದ ಇಂಥ ನೀತಿ ವಿರೋಧಿಸಿ ಆ.15ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಲಾಗುತ್ತದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ ಎಚ್ಚರಿಸಿದರು.
ಅವರು ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಈ ಹಿಂದೆ ಒಪೆಕ್ ಆಸ್ಪತ್ರೆಯನ್ನು ರಿಮ್ಸ್ ಕಾಲೇಜಿನ ಅಡಿ ಆರಂಭಿಸುವುದಾಗಿ ತಿಳಿಸಿದ್ದರು. ಆದರೆ ಸರ್ಕಾರ ರಿಮ್ಸ್ ನಲ್ಲಿ ಕಂಡುಬಂದಿರುವ ನ್ಯೂನತೆ ಸರಿಪಡಿಸಲು ಒಪೆಕ್ ಹೆಸರು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಆರೋಪ: ಕಳೆದ 15 ತಿಂಗಳಿನಿಂದ ಮುಚ್ಚಿರುವ ಒಪೆಕ್ ಆಸ್ಪತ್ರೆಯ ಪುನಾರಂಭಕ್ಕೆ ಸಂಬಂಧಿಸಿ ಕಾಂಗ್ರೆಸ್ ಸರ್ಕಾರ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಆಸ್ಪತ್ರೆಯನ್ನು ಸ್ವಚ್ಛಗೊಳಿಸುವ ಮೂಲಕ ಶೀಘ್ರ ಪ್ರಾರಂಭಿಸಲಾಗುತ್ತದೆ ಎಂದು ವಿಶೇಷಾಧಿಕಾರಿ ಡಾ.ಶಂಕರ ಮಲಪುರೆ ಡಿ ಗ್ರೂಪ್ ನೌಕರರಿಗೆ ಭರವಸೆ ನೀಡಿದ್ದರು. ಆದರೆ ಸ್ವಚ್ಛತೆಯ ಕಾರ್ಯ ಕೈಗೊಂಡ ನಂತರದಲ್ಲಿ ಡಿ ಗ್ರೂಪ್ ನೌಕರರನ್ನು ಸೇವೆಯಿಂದ ಮರಳಿ ಕಳಿಸಿ ಹೊರಗುತ್ತಿಗೆ ಮೇಲೆ ಮುಂದಿನ ದಿನಗಳಲ್ಲಿ ನೇಮಿಸುವುದಾಗಿ ತಿಳಿಸಿದ್ದಾರೆಂದು ಆರೋಪಿಸಿದರು.
ಅತ್ಯಾಧುನಿಕ ಸೌಲಭ್ಯಗಳ ಆಸ್ಪತ್ರೆ ಆರಂಭಿಸುವ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಒಪೆಕ್ ಆಸ್ಪತ್ರೆಗೆ ಸ್ಥಳೀಯ ವೈದ್ಯರನ್ನೇ ನೇಮಿಸಿಕೊಂಡಿದೆ. ಇದರಿಂದ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳು ಜನತೆಗೆ ದೊರೆಯುವುದು ಅನುಮಾನವಾಗಿದೆ ಎಂದು ಟೀಕಿಸಿದರು.
ಮರು ಪ್ರಸ್ತಾವನೆ: ಸರ್ಕಾರವು ರು. 11,48,38 ಸಾವಿರ ಸಿಬ್ಬಂದಿ ನೇಮಕಕ್ಕೆ ಹಾಗೂ ರು. 13,02,50,000ಗಳನ್ನು ಒಪೆಕ್ ಆಸ್ಪತ್ರೆಗೆ ಉಪಕರಣಗಳ ಖರೀದಿಗೆ ಮರು ಪ್ರಸ್ತಾವನೆಗೆ ನಿಗದಿ ಮಾಡಿದೆ. ಈ ಎಲ್ಲ ಮೊತ್ತವನ್ನು ಒಪೆಕ್ ಹೆಸರಿನಲ್ಲಿಯೇ ಬಿಡುಗಡೆ ಗೊಳಿಸಿದ ಸರ್ಕಾರಲು ರಿಮ್ಸ್ನಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಬಳಸುವ ಕಾರ್ಯ ಮಾಡುತ್ತಿದೆ ಎಂದು ದೂರಿದರು.
ಒಪೆಕ್ನ 68 ಶುಶೂಷಕರನ್ನು ರಿಮ್ಸ್ ಕಾಲೇಜಿಗಾಗಿ ಸ್ಟೈಫಂಡರಿ ಆಧಾರದ ಮೇಲೆ 6 ತಿಂಗಳಿಗೆ ನೇಮಿಸಲಾಗಿದೆ. ಈ ನೇಮಕಾತಿಯ ಉದ್ದೇಶ ಈ ಹಿಂದೆ ಭಾರತೀಯ ವೈದ್ಯಕೀಯ ಮಂಡಳಿಯು ರಿಮ್ಸ್ ನಲ್ಲಿನ ನೂನ್ಯತೆ ಸರಿಪಡಿಸಲು ಸೂಚಿಸಿದ್ದರಿಂದ ಸರ್ಕಾರ ಇಂಥ ಕ್ರಮ ಕೈಗೊಂಡಿದೆ ಎಂದು ಟೀಕಿಸಿದರು.
ಸುಳ್ಳು ಭರವಸೆ: ಒಪೆಕ್ ಆಸ್ಪತ್ರೆ ಮುಚ್ಚಿದ್ದರಿಂದ ಕಳೆದೊಂದು ವರ್ಷದಲ್ಲಿ 10 ಸಾವಿರಕ್ಕೂ ಹೆಚ್ಚಿನ ಬಡವರು ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ. 285 ಜನ ನೌಕರರು ಹಾಗೂ ಸಿಬ್ಬಂದಿಗಳು ಆಸ್ಪತ್ರೆ ಮುಚ್ಚಿದ್ದರಿಂದ ಬೀದಿಗೆ ಬಿದ್ದಿದ್ದಾರೆ. ಹೈ.ಕ. ಭಾಗದ ಜನರಿಗೆ ಬಿಜೆಪಿ ಸರ್ಕಾರದಿಂದಾದ ಅನ್ಯಾಯವನ್ನು ಮೀರಿಸಿ ಕಾಂಗ್ರೆಸ್ ಸರ್ಕಾರ ರಿಮ್ಸ್ ಗೆ ಅನುಕೂಲ ಕಲ್ಪಿಸಲು ಒಪೆಕ್ ಆಸ್ಪತ್ರೆಯ ಪುನಾರಂಭದ ಸುಳ್ಳು ಭರವಸೆ ನೀಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಒಪೆಕ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಟಿಲಿ ಚಿಕಿತ್ಸೆಯನ್ನು ಸಂಪೂರ್ಣ ಸ್ಥಗಿತಗೊಳಿಸುವ ಹುನ್ನಾರ ನಡೆಸಿದೆ. ರಾಯಚೂರು, ಯಾದಗಿರಿ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳ ಲಾಬಿ ಹಾಗೂ ರಿಮ್ಸ್ಗೆ ಎಂಸಿಐ ಷರತ್ತುಗಳಿಂದ ಪಾರು ಮಾಡುವ ತಂತ್ರಕ್ಕೆ ಒಪೆಕ್ ಆಸ್ಪತ್ರೆಯನ್ನು ತೆರೆಯುವ ಹೆಸರಲ್ಲಿ ಮುಚ್ಚಲಾಗುತ್ತಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಆ.15ರಂದು ನಗರಕ್ಕೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಮುತ್ತಿಗೆ ಹಾಕಲಾಗುತ್ತದೆ. ಒಪೆಕ್ ಆಸ್ಪತ್ರೆ ಪರವಾಗಿರುವ ಎಲ್ಲರೂ ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭ ರೈತ ಸಂಘದ ತಾಲೂಕು ಅಧ್ಯಕ್ಷ ರಾಜಶೇಖರ್, ಜಿಲ್ಲಾ ಕಾರ್ಯದರ್ಶಿ ಅಬ್ಬಾಸ್ ಅಲಿ, ಒಪೆಕ್ ನೌಕರರ ಸಂಘದ ಮಲ್ಲೇಶ್ ಮತ್ತಿತರರಿದ್ದರು.