ಮಂತ್ರಾಲಯ: ತಗ್ಗಿದ ಪ್ರವಾಹ, ಹರಿದು ಬಂದ ಭಕ್ತ ಸಮೂಹ
ರಾಯಚೂರು: ತುಂಗಭದ್ರಾ ಪ್ರವಾಹ ಮತ್ತು ಸೀಮಾಂಧ್ರ ಗದ್ದಲಗಳಿಂದ ಮಂತ್ರಾಲಯದ ಭಕ್ತರಲ್ಲಿ ಉಂಟಾಗಿದ್ದ ಆತಂಕವೀಗ ನಿವಾರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಆಂಧ್ರದ ಪ್ರಸಿದ್ಧ ಧಾರ್ಮಿಕ ತಾಣ, ಆರಾಧ್ಯ ದೈವ ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ದಿನವೂ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡಲಾರಂಭಿಸಿದ್ದು, ಆರಾಧನಾ ಮಹೋತ್ಸವಕ್ಕೂ ಭರದ ಸಿದ್ಧತೆ ನಡೆಯುತ್ತಿದೆ. ಈ ಸಂಭ್ರಮದಿಂದ ಶ್ರೀಮಠಕ್ಕೆ ಕಳೆಗಟ್ಟಿದೆ.
ಕಳೆದೊಂದು ವಾರ ತುಂಗಭದ್ರಾ ನದಿ ಉಕ್ಕಿ ಹರಿದಿದ್ದರಿಂದ ಆತಂಕಗೊಂಡ ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡುತ್ತಿರಲಿಲ್ಲ. ಬಿಕೋ ಎನ್ನುತ್ತಿದ್ದ ಮಂತ್ರಾಲಯ ಶ್ರೀಕ್ಷೇತ್ರದಲ್ಲೀಗ ಎಲ್ಲವೂ ಸುಸೂತ್ರವಾಗಿದೆ. ಜತೆಗೆ ಸಾಲು ಸಾಲು ರಜೆಗಳೂ ಭಕ್ತರ ಆಗಮನಕ್ಕೆ ಪೂರಕ ನೆರವು ಕಲ್ಪಿಸಿದ್ದು, ಕಳೆದ ಎರಡು ದಿನಗಳಿಂದ ದಿನವೂ ಸಾವಿರಾರು ಸಂಖ್ಯೆಯ ಭಕ್ತರು ಶ್ರೀಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.
ಮಂತ್ರಾಲಯ ಶ್ರೀಮಠದ ಪಕ್ಕದಲ್ಲಿಯೇ ಹರಿಯುವ ತುಂಗಭದ್ರಾ ನದಿ 2009ರಲ್ಲಿ ಉಕ್ಕಿ ಹರಿದಿದ್ದರಿಂದ ಗ್ರಾಮಸ್ಥರಷ್ಟೇ ಅಲ್ಲದೆ ದೂರದೂರದಿಂದ ಆಗಮಿಸಿದ್ದ ಭಕ್ತರೂ ಆತಂಕಕ್ಕೆ ಸಿಲುಕಿದ್ದರು. ನಂತರ ಸ್ವಲ್ಪವೇ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದರೂ ಭಕ್ತರಲ್ಲಿ ಭೀತಿ ಸೃಷ್ಟಿಯಾಗುತ್ತಿತ್ತು.
ಹೆಚ್ಚುತ್ತಿರುವ ಭಕ್ತರ ಸಂಖ್ಯೆ: ಅದರಂತೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ತುಂಗಭದ್ರಾ ಜಲಾಶಯದಿಂದ 1.50 ಲಕ್ಷ ಕ್ಯುಸೆಕ್ ನೀರು ಹೊರಹರಿಸಿದ್ದರಿಂದ ಮಂತ್ರಾಲಯದ ಬಳಿ ತುಂಗಭದ್ರಾ ನದಿ ಉಕ್ಕಿ ಹರಿದಿತ್ತು. ಅದರಿಂದ ಮಂತ್ರಾಲಯದ ನಿವಾಸಿಗಳು ಹಾಗೂ ಭಕ್ತರು ಆತಂಕಕೊಂಡಿದ್ದರು. ಸದ್ಯ ತುಂಗಭದ್ರಾ ನದಿ ಶಾಂತವಾಗಿ ಹರಿಯುತ್ತಿದ್ದು, ಭಕ್ತರು ಮತ್ತೆ ಮಂತ್ರಾಲಯಕ್ಕೆ ಆಗಮಿಸತೊಡಗಿದ್ದಾರೆ.
ಅದೇ ರೀತಿ ತೆಲಂಗಾಣ ಪ್ರತ್ಯೇಕ ರಾಜ್ಯ ಘೋಷಣೆಯಾಗಿದ್ದರಿಂದ ಸೀಮಾಂಧ್ರದ ವ್ಯಾಪ್ತಿಯಲ್ಲಿರುವ ಮಂತ್ರಾಲಯಕ್ಕೂ ಪ್ರತಿಭಟನೆ ಬಿಸಿ ತಟ್ಟಿತ್ತು. ಹಾಗಾಗಿ ಮಂತ್ರಾಲಯಕ್ಕೆ ತಲುಪುವ ಎಲ್ಲ ಮಾರ್ಗಗಳಲ್ಲಿಯೂ ಹೋರಾಟಗಾರರು ಪ್ರತಿಭಟಿಸುತ್ತಿದ್ದರಿಂದ ನಾಲ್ಕು ದಿನಗಳಿಗೂ ಹೆಚ್ಚು ಕಾಲ ಬಸ್ ಸಂಚಾರವೂ ಸ್ಥಗಿತಗೊಂಡಿತ್ತು. ಇದು ಭಕ್ತರ ಸಂಖ್ಯೆ ಇಳಿಮುಖವಾಗಲ್ಲೊಂದು ಕಾರಣವಾಗಿತ್ತು.
ರಾಯರ ದರ್ಶನ: ಸದ್ಯ ಸೀಮಾಂಧ್ರ ಹೋರಾಟ ತಣ್ಣಗಾಗಿ, ಮಂತ್ರಾಲಯಕ್ಕೆ ರಾಯಚೂರು ಮತ್ತಿತರೆಡೆಯಿಂದ ಸಂಚಾರ ಪುನಾರಂಭಗೊಂಡಿದೆ. ಅದರಿಂದ ಮಂತ್ರಾಲಯಕ್ಕೆ ಎಂದಿನಂತೆಯೇ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡಿ ರಾಯರ ದರ್ಶನ ಪಡೆಯುತ್ತಿದ್ದಾರೆ.
ಆ.19ರಿಂದ ಶ್ರೀರಾಯರ ಆರಾಧನಾ ಮಹೋತ್ಸವದ ಸಪ್ತರಾತ್ಪೋತ್ಸವ ಆರಂಭಗೊಳ್ಳಲಿದ್ದು, ಶ್ರೀಮಠದ ಆಡಳಿತವು ಭರದ ಸಿದ್ಧತೆಯಲ್ಲಿ ತೊಡಗಿದೆ. ಶ್ರೀಮಠಕ್ಕೆ ಬಣ್ಣ ಲೇಪನ, ಶ್ರೀಮಠದ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭವ್ಯ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಒಟ್ಟಿನಲ್ಲಿ ಶ್ರೀಕ್ಷೇತ್ರಕ್ಕೆ ವಿಶೇಷ ಕಳೆ ಬಂದಿದೆ.