ಮಂತ್ರಾಲಯಕ್ಕೆ ಈಗ ಭಕ್ತರ ಪ್ರವಾಹ!
ಕನ್ನಡಪ್ರಭ ವಾರ್ತೆ , ರಾಯಚೂರು , ಆ.10
ತುಂಗಭದ್ರಾ ಪ್ರವಾಹ ಮತ್ತು ಸೀಮಾಂಧ್ರ ಗದ್ದಲದಿಂದ ಮಂತ್ರಾಲಯದ ಭಕ್ತರಲ್ಲಿ ಉಂಟಾಗಿದ್ದ ಆತಂಕ ಈಗ ನಿವಾರಣೆಯಾಗಿದೆ. ಪರಿಣಾಮ ಆಂಧ್ರದ ಪ್ರಸಿದ್ಧ ಧಾರ್ಮಿಕ ತಾಣ, ಆರಾಧ್ಯ ದೈವ ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ದಿನವೂ ಸಾವಿರಾರು ಸಂಖ್ಯೆಯ ಭಕ್ತರು ಈಗ ಭೇಟಿ ನೀಡಲಾರಂಭಿಸಿದ್ದಾರೆ. ಈಗ ಆರಾಧನಾ ಮಹೋತ್ಸವಕ್ಕಾಗಿ ಭರದ ಸಿದ್ಧತೆ ಜಾರಿಯಲ್ಲಿದ್ದು, ಸಂಭ್ರಮ ಶ್ರೀಮಠಕ್ಕೆ ಕಳೆಗಟ್ಟಿದೆ.
ಕಳೆದೊಂದು ವಾರ ತುಂಗಭದ್ರಾ ನದಿ ಉಕ್ಕಿ ಹರಿದಿದ್ದರಿಂದ ಬಿಕೋ ಎನ್ನುತ್ತಿದ್ದ ಮಂತ್ರಾಲಯ ಶ್ರೀಕ್ಷೇತ್ರದಲ್ಲೀಗ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಜತೆಗೆ ಸಾಲು ಸಾಲು ರಜೆಗಳೂ ಭಕ್ತರ ಆಗಮನಕ್ಕೆ ಪೂರಕ ನೆರವು ಕಲ್ಪಿಸಿದ್ದು, ಕಳೆದ ಎರಡು ದಿನಗಳಲ್ಲಿ ದಿನವೂ ಸಾವಿರಾರು ಸಂಖ್ಯೆಯ ಭಕ್ತರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಮಂತ್ರಾಲಯ ಶ್ರೀಮಠದ ಪಕ್ಕದಲ್ಲಿಯೇ ಹರಿಯುವ ತುಂಗಭದ್ರಾ ನದಿ 2009ರಲ್ಲಿ ಉಕ್ಕಿ ಹರಿದಿದ್ದರಿಂದ ಗ್ರಾಮಸ್ಥರಷ್ಟೇ ಅಲ್ಲ ದೂರದೂರದಿಂದ ಆಗಮಿಸಿದ್ದ ಭಕ್ತರು ಆತಂಕಕ್ಕೆ ಸಿಲುಕಿದ್ದರು. ಆನಂತರದಲ್ಲಿ ಸ್ವಲ್ಪ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದರೂ ಭಕ್ತರಲ್ಲಿ ಭೀತಿ ಮೂಡುತ್ತಿತ್ತು.
ಹೆಚ್ಚುತ್ತಿರುವ ಭಕ್ತರ ಸಂಖ್ಯೆ: ಅದರಂತೆ ಈಚೆಗೆ ನದಿಪಾತ್ರದಲ್ಲಿ ಸುರಿದ ಮಳೆಯಿಂದಾಗಿ ತುಂಗಭದ್ರಾ ಜಲಾಶಯದಿಂದ 1.50 ಲಕ್ಷ ಕ್ಯುಸೆಕ್ ನಷ್ಟು ನೀರು ಹೊರಹರಿಸಿದ್ದರಿಂದ ಮಂತ್ರಾಲಯದ ಬಳಿ ತುಂಗಭದ್ರಾ ನದಿ ಉಕ್ಕಿ ಹರಿದಿತ್ತು. ಅದರಿಂದ ಮಂತ್ರಾಲಯ ನಿವಾಸಿಗಳು ಆತಂಕಕ್ಕೆ ಸಿಲುಕಿದ್ದರು. ಹಾಗೆಯೇ ದೂರದ ಊರುಗಳಿಂದ ಆಗಮಿಸುತ್ತಿದ್ದ ಭಕ್ತರು ಭೀತಿಗೊಳಗಾಗಿ ಕ್ಷೇತ್ರಕ್ಕೆ ಆಗಮಿಸುವುದನ್ನು ಮುಂದೂಡಿದ್ದರು. ಸದ್ಯ ತುಂಗಭದ್ರಾ ನದಿ ಶಾಂತವಾಗಿ ಹರಿಯುತ್ತಿದ್ದು ಭಕ್ತರು ಮತ್ತೆ ಮಂತ್ರಾಲಯಕ್ಕೆ ಆಗಮಿಸತೊಡಗಿದ್ದಾರೆ.
ಅದೇ ರೀತಿ ತೆಲಂಗಾಣ ಪ್ರತ್ಯೇಕ ರಾಜ್ಯ ಘೋಷಣೆಯಾಗಿದ್ದರಿಂದ ಸೀಮಾಂಧ್ರದ ವ್ಯಾಪ್ತಿಯಲ್ಲಿರುವ ಮಂತ್ರಾಲಯಕ್ಕೂ ಪ್ರತಿ ಭಟನೆ ಬಿಸಿ ತಟ್ಟಿತ್ತು. ಹಾಗಾಗಿ ಮಂತ್ರಾಲಯಕ್ಕೆ ತಲುಪುವ ಎಲ್ಲ ಮಾರ್ಗಗಳಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರಿಂದ ಬಸ್ ಸಂಚಾರ ಬಹುತೇಕ ನಾಲ್ಕು ದಿನಗಳಿಗೂ ಹೆಚ್ಚಿನ ಕಾಲ ಸ್ಥಗಿತಗೊಂಡಿತ್ತು. ಅದರಿಂದ ಮಂತ್ರಾಲಯಕ್ಕೆ ಆಗಮಿಸುವ ಭಕ್ತರಿಗೆ ತೊಂದರೆಯಾಗಿತ್ತು.
ರಾಯರ ದರ್ಶನ: ಸದ್ಯ ಸೀಮಾಂಧ್ರ ಹೋರಾಟ ಕೊಂಚಮಟ್ಟಿಗೆ ತಣ್ಣಗಾಗಿದೆ. ಹೀಗಾಗಿ ಮಂತ್ರಾಲಯಕ್ಕೆ ರಾಯಚೂರು ಮತ್ತಿತರೆಡೆಯಿಂದ ಸಂಚಾರ ಪುನಾರಂಭಗೊಂಡಿದೆ. ಅದರಿಂದಾಗಿ ಮಂತ್ರಾಲಯಕ್ಕೆ ಎಂದಿನಂತೆಯೇ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡಿ ರಾಯರ ದರ್ಶನ ಪಡೆಯುತ್ತಿದ್ದಾರೆ.
ಆ. 19ರಿಂದ ಶ್ರೀರಾಯರ ಆರಾಧನಾ ಮಹೋತ್ಸವದ ಸಪ್ತರಾತ್ಪೋತ್ಸವ ಆರಂಭಗೊಳ್ಳಲಿದ್ದು, ಶ್ರೀಮಠದ ಆಡಳಿತವು ಭರದ ಸಿದ್ಧತೆಗೆ ತೊಡಗಿದೆ.ಶ್ರೀಮಠಕ್ಕೆ ಬಣ್ಣ ಲೇಪನ, ಶ್ರೀಮಠದ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭವ್ಯ ವೇದಿಕೆ ಸಜ್ಜುಗೊಳಿಸುವ ಕಾರ್ಯ ಭರದಿಂದ ಸಾಗಿದ್ದು, ಆರಾಧನೆಗೆ ಮಂತ್ರಾಲಯ ಸಂಭ್ರಮದಿಂದ ಸಜ್ಜಾಗುತ್ತಿದೆ. ಶ್ರೀರಾಯರ ಆರಾಧನೆ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದ್ದು, ಶ್ರೀಮಠವು ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ನಿರತವಾಗಿದೆ.
-ಜಗನ್ನಾಥ ಆರ್. ದೇಸಾಯಿ