ರೇಲ್ವೆ ಒಳ ಸೇತುವೆ, ರಸ್ತೆ ಕಳಪೆ ಆರೋಪ: ಡಿಸಿ ಭೇಟಿ ಪರಿಶೀಲನೆ
ರಾಯಚೂರು: ನಗರದ ಹೊರವಲಯದ ಪೋತಗಲ್ ಬಳಿ ಗದ್ವಾಲ್- ರಾಯಚೂರು ರೇಲ್ವೆ ಮಾರ್ಗದ ರೇಲ್ವೆ ಅಂಡರ್ ಪಾಸ್‌ನಲ್ಲಿ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂಬ ದೂರಿನ ಹಿನ್ನೆಲೆ ಶನಿವಾರ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪಾಪಾರೆಡ್ಡಿ ಮತ್ತಿತರರು, 23 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್ 30 ಅಡಿಯಿದ್ದು, ಸೇತುವೆಯ ಎರಡೂ ಬದಿಗೆ ರಸ್ತೆ ಎತ್ತರದಲ್ಲಿ ನಿರ್ಮಿಸಲಾಗಿದೆ. ಅದರಿಂದ ಮಳೆಯಾದಾಗಲೆಲ್ಲ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಸ್ಥಳ ಪರಿಶೀಲನೆ ನಡೆಸಿ ಅಂಡರ್ ಪಾಸ್ ರಸ್ತೆಯನ್ನು ಕಾಂಕ್ರಿಟ್ ರಸ್ತೆಯಾಗಿ ನಿರ್ಮಿಸಲು ಸೂಚಿಸಿದರು. ಅದೇ ರೀತಿ ಈ ಬಗ್ಗೆ ರೇಲ್ವೆ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ತಿಳಿಸಿದರು.
ಮಾಜಿ ಶಾಸಕ ಪಾಪಾರೆಡ್ಡಿ ಮಾತನಾಡಿ, ಆ.15ಕ್ಕೆ ಈ ಮಾರ್ಗದಲ್ಲಿ ರೈಲು ಓಡಾಟಕ್ಕೆ ಚಾಲನೆ ನೀಡುವ ಬಗ್ಗೆ ಸೂಚನೆಯಿದ್ದು, ಈ ಎಲ್ಲ ಕಳಪೆ ಕಾಮಗಾರಿಗಳನ್ನು ಪುನಾ ದುರಸ್ತಿಗೊಳಿಸಿ ಗುಣಮಟ್ಟದ ಕಾಮಗಾರಿ ಪರೀಕ್ಷೆಯ ನಂತರವೇ ರೈಲುಗಳ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪುಂಡ್ಲ ನರಸರೆಡ್ಡಿ, ವೆಂಕಟರೆಡ್ಡಿ, ಗದಾರ್ ಬೆಟ್ಟಪ್ಪ, ಗುಡ್ಸಿ ನರಸರೆಡ್ಡಿ, ಕೆ. ರವಿ ಸೇರಿ ಅನೇಕರಿದ್ದರು.