ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶುರುವಾಯ್ತು ಲೋಕಸಭಾ ಚುನಾವಣೆ ಕಸರತ್ತು

Vishwanath S
Updated On : 11 Aug 2013, 12:12 pm

ಕನ್ನಡಪ್ರಭ ವಾರ್ತೆ , ಬಳ್ಳಾರಿ , ಆ.10
ಲೋಕಸಭೆ ಚುನಾವಣೆಗೆ ಇನ್ನೂ ಏಳೆಂಟು ತಿಂಗಳಿರುವಾಗಲೇ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಳ್ಳಾರಿಯ ಪ್ರಬಲ ನಾಯಕರು ಕಸರತ್ತು ನಡೆಸುತ್ತಿದ್ದಾರೆ.
ಹೈದರಾಬಾದ್ ಕರ್ನಾಟಕದಲ್ಲಿಯೇ ಬೀದರ್ ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಹೆಚ್ಚು ಕುತೂಹಲ ಕೆರಳಿಸಿದ್ದು, ಇದೀಗ ಹೈ-ಕದಲ್ಲಿರುವ ವಿಧಾನಸಭೆ ಚುನಾವಣೆ ಟಿಕೆಟ್ ಪಡೆಯದ ಪ್ರಬಲ ರಾಜಕಾರಣಿಗಳು ಲೋಕಸಭೆ ಟಿಕೆಟ್ ಪಡೆಯಲು ಮುಂದಾಗಿದ್ದಾರೆ.
ಬಳ್ಳಾರಿ ಜೆಡಿಎಸ್ ಮುಖಂಡ, ಮಾಜಿ ಶಾಸಕ ಎನ್. ಸೂರ್ಯನಾರಾಯಣ ರೆಡ್ಡಿ ಅವರನ್ನು ಕೊಪ್ಪಳ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಜೆಡಿಎಸ್ ಚಿಂತಿಸುತ್ತಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಪ್ರಬಲ ನಾಯಕರೆಂದು ಕರೆಯಿಸಿಕೊಂಡವರು ಇದೀಗ ಕೊಪ್ಪಳ ಲೋಕಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಮುಂಬರುವ ಚುನಾವಣೆಯಲ್ಲಿಯೂ ಬಿಜೆಪಿ, ಜೆಡಿಎಸ್ ಮೈತ್ರಿ ಮುಂದುವರಿಯು ಸುದ್ದಿ ಕೇಳಿ ಬರುತ್ತಿದೆ.
ಕೊಪ್ಪಳದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಅರ್ಜಿ ಸಲ್ಲಿಸಿದರೆ, ಅದರ ಬೆನ್ನಲ್ಲೆ ಜೆಡಿಎಸ್‌ನ ಸೂರ್ಯನಾರಾಯಣ ರೆಡ್ಡಿ ಹೆಸರು ಕೇಳಿಬರುತ್ತಿರುವುದು ನೋಡಿದರೆ, ಈಗಿನಿಂದಲೇ ಕೊಪ್ಪಳ ಲೋಕಸಭಾ ಕ್ಷೇತ್ರ ರಂಗೇರುತ್ತಿದೆ.
ಕೊಪ್ಪಳದ ಮೇಲೆ ಕಣ್ಣು: ಹಲವು ರಾಜಕೀಯ ಕಾರಣ ಮುಂದಿಟ್ಟುಕೊಂಡು ಬಳ್ಳಾರಿಯ ಕೆಲವು ನಾಯಕರು ಕೊಪ್ಪಳದಲ್ಲಿ ಅದೃಷ್ಟ ಪರೀಕ್ಷಿಸಲು ಹೊರಟಿದ್ದಾರೆ. ಎನ್. ಸೂರ್ಯನಾರಾಯಣ ರೆಡ್ಡಿ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯಲಬುರ್ಗಾ, ಕುಷ್ಟಗಿ, ಗಂಗಾವತಿ, ಕೊಪ್ಪಳ, ಸಿರುಗುಪ್ಪ, ಕನಕಗಿರಿ ಸೇರಿದಂತೆ ಇತರೆಡೆ ಉತ್ತಮ ರಾಜಕೀಯ ಒಡನಾಟವನ್ನಿಟ್ಟುಕೊಂಡಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಸೇರ್ಪಡೆಯಾಗಿರುವುದರಿಂದ ತಮ್ಮ ರಾಜಕೀಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ.
ಮೈತ್ರಿಯಿಂದ ಮತ್ತಷ್ಟು ಚರ್ಚೆಗೆ ಗ್ರಾಸ: ಈಗಾಗಲೇ ಮಂಡ್ಯ, ರಾಮನಗರ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಲೋಕಸಭೆಯಲ್ಲಿ ಅವರ ಮೈತ್ರಿ ಮಾತು ಕೇಳಿಬರುತ್ತಿರುವುದರಿಂದ ಬಿಜೆಪಿ, ಜೆಡಿಎಸ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಕೊಪ್ಪಳದಿಂದ ಜೆಡಿಎಸ್ ಅಭ್ಯರ್ಥಿ ಚುನಾವಣೆ ಕಣಕ್ಕೆ ಇಳಿದಿದ್ದೇ ಆದರೆ, ಕೊಪ್ಪಳ ಲೋಕಸಭಾ ಕ್ಷೇತ್ರ ಮತ್ತಷ್ಟು ರಂಗೇರಲಿದೆ.
ಇನ್ನು ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು (ಬಿಎಸ್‌ಆರ್ ಕಾಂಗ್ರೆಸ್) ಬಿಜೆಪಿಯಲ್ಲಿ ವಿಲೀನವಾದರೆ, ಬಳ್ಳಾರಿಯಿಂದ ಶ್ರೀರಾಮುಲು, ಕೊಪ್ಪಳದಲ್ಲಿ ಸೋಮಶೇಖರ ರೆಡ್ಡಿ ನಿಲ್ಲುತ್ತಾರೆ ಎಂಬ ಗಾಳಿ ಸುದ್ದಿಯೂ ಹರಿದಾಡುತ್ತಿದೆ. ಮೈತ್ರಿಯಾದರೆ ಹೊಂದಾಣಿಕೆಯ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ.
ಲಾಭ, ನಷ್ಟಗಳ ಲೆಕ್ಕಾಚಾರ: ಜೆಡಿಎಸ್‌ನಲ್ಲಿ ಹೈದರಾಬಾದ್ ಕೋರ್ ಕಮಿಟಿ ಅಧ್ಯಕ್ಷರಾಗಿದ್ದ ಎನ್. ಸೂರ್ಯನಾರಾಯಣ ರೆಡ್ಡಿ, ಕೊಪ್ಪಳ ಹೈ-ಕ ಭಾಗದಲ್ಲಿ ಬರುವುದರಿಂದ ತಮಗೆ ಅಲ್ಲಿ ಹೆಚ್ಚು ಲಾಭವಾಗುವ ನಿರೀಕ್ಷೆಯಲ್ಲಿದ್ದಾರೆ. ಮಾಜಿ ಸಂಸದ ಕೆ.ಸಿ. ಕೊಂಡಯ್ಯ ತಾವು ಸಂಸದರಾಗಿದ್ದಾಗ ಸಿರುಗುಪ್ಪ ಕ್ಷೇತ್ರವು ತಮ್ಮ ವ್ಯಾಪ್ತಿಗೆ ಬಂದಿತ್ತು ಎಂಬ ಲೆಕ್ಕಾಚಾರ ಮುಂದಿಟ್ಟುಕೊಂಡು, ಸ್ಪರ್ಧೆಯ ಸಾಧಕಬಾಧಕಗಳ ಬಗ್ಗೆ ಚಿಂತಿಸುತ್ತಿದ್ದಾರೆ.
ಈ ಭಾಗದ ಪ್ರಮುಖ ನಾಯಕರಿಗೆ ವಿಧಾನಪರಿಷತ್, ರಾಜ್ಯಸಭಾ ಸದಸ್ಯತ್ವ ನೀಡುವುದು ಕಷ್ಟ. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಟಿಕೆಟ್ ನೀಡುವ ಮೂಲಕ ಅವರನ್ನು ತೃಪ್ತಿಪಡಿಸುವ ಅನಿವಾರ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಹೈ-ಕದ 5 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು ಮೀಸಲು ಇರುವುದರಿಂದ, ಇದೀಗ ಅನಿವಾರ್ಯವಾಗಿ ಬೀದರ್, ಕೊಪ್ಪಳ ಕ್ಷೇತ್ರದತ್ತ ಎಲ್ಲರ ದೃಷ್ಟಿ ನೆಟ್ಟಿದೆ.

- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement