ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜಿಲ್ಲಾ ಮಂತ್ರಿಗೆ ಮುತ್ತಿಗೆ ಬಿಸಿ?

Lingaraj Badiger
Updated On : 14 Aug 2013, 11:03 am

ಕನ್ನಡಪ್ರಭ ವಾರ್ತೆ, ರಾಯಚೂರು, ಆ.13
ನಿರಂತರ ಬದಲಾಗುವ ಉಸ್ತುವಾರಿ ಸಚಿವರು, ಅಧಿಕಾರಿಗಳಲ್ಲಿ ಸ್ಪಂದನೆಯ ಕೊರತೆ. ಪರಿಣಾಮ ಬಗೆಹರಿಯದ ದೀರ್ಘ ಕಾಲೀನ ಸಮಸ್ಯೆಗಳು. ಬೇಡಿಕೆಗಳಿಗೆ ಇಲ್ಲಿ ಕೊನೆಯಿಲ್ಲ.
 ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲಲ್ಲ ಎಂಬುದು ಸಂಘಟನೆಗಳ ವಾದ. ಜನತೆಯ ಸಮಸ್ಯೆಗಳಿಗೆ ದೊರೆಯದ ಪರಿಹಾರ. ಪರಿಣಾಮ ಸ್ವಾತಂತ್ರೋತ್ಸವಕ್ಕೆ ಆಗಮಿಸುವ ಉಸ್ತುವಾರಿ ಸಚಿವರಿಗೆ ಮುತ್ತಿಗೆಯ ಸ್ವಾಗತ ನೀಡಲು ಸಂಘಟನೆಗಳು ಸಜ್ಜು. ಜಿಲ್ಲೆಯಲ್ಲಿ ಆ.15ರಂದು ಆಚರಿಸಲಾಗುವ ಸ್ವಾತಂತ್ರೋತ್ಸವ ಸಮಾರಂಭ ಕಳೆದ ಅನೇಕ ವರ್ಷಗಳಿಂದ ಜಿಲ್ಲೆಗೆ ಆಗಮಿಸುವ ಸಚಿವರಿಗೆ ಮುತ್ತಿಗೆಗೆ ಸಾಕ್ಷಿಯಾಗುತ್ತಿದೆ. ಈ ಬಾರಿಯೂ ಅಂಥದ್ದೇ ಪರಿಸ್ಥಿತಿಯಿದೆ.
ಸಚಿವರಿಗೆ ಮುತ್ತಿಗೆ: ಕಳೆದ ವರ್ಷಗಳಲ್ಲಿ ಸ್ವಾತಂತ್ರೋತ್ಸವದ ಸಂದರ್ಭ ಸದಾಶಿವ ಆಯೋಗದ ವರದಿ ಜಾರಿ, ದಲಿತರ ಮೇಲಿನ ದೌರ್ಜನ್ಯ ಸೇರಿ ವಿವಿಧ ಕಾರಣಗಳಿಗೆ ಸಚಿವರಿಗೆ ಮುತ್ತಿಗೆ ಹಾಕಿದ ಅನೇಕ ಪ್ರಸಂಗಗಳು ನಡೆದಿವೆ. ಆನಂತರದಲ್ಲಿ ಸಂಘಟನೆಗಳ ಮನವಿಗೆ ಕಿಮ್ಮತ್ತು ದೊರೆಯದ್ದರಿಂದ ಪ್ರತಿ ವರ್ಷ ಸ್ವಾತಂತ್ರ ಸಂಭ್ರಮಕ್ಕೆ ಮುತ್ತಿಗೆಯಂಥ ಕಾರ್ಯಕ್ರಮಗಳು ತೀರಾ ಸಾಮಾನ್ಯ ಎಂಬಂತಾಗಿದೆ.
ಪ್ರಸಕ್ತ ವರ್ಷ ಆ.15ರಂದು ಆಚರಿಸುವ ಸ್ವಾತಂತ್ರೋತ್ಸವದ ಸಂದರ್ಭ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಚಿವರ ಆಗಮನದ ಹಿನ್ನೆಲೆ ಈಗಲೇ ಹೋರಾಟಗಾರರಿಂದ ಪ್ರತಿಭಟನೆ ಎಚ್ಚರಿಕೆ ದೊರೆತಿವೆ.
ದಲಿತ ಸಂಘರ್ಷ ಸಮಿತಿ, ರಾಜ್ಯ ಅಂಗವಿಕಲರ ಒಕ್ಕೂಟ, ಕರ್ನಾಟಕ ರೈತ ಸಂಘದ ಸಹಯೋಗದಲ್ಲಿ ಒಪೆಕ್ ನೌಕರರ ಸಂಘಗಳು ಸಚಿವರಿಗೆ ಮುತ್ತಿಗೆ ಹಾಕುವ ಮೂಲಕ ಬಿಸಿ ಮುಟ್ಟಿಸಲು ನಿರ್ಧರಿಸಿರುವುದಾಗಿ ಘೋಷಿಸಿವೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಬೇರೆ ದಾರಿಯಿಲ್ಲ ಎಂಬುದು ಸಂಘಟನೆಗಳ ವಾದ.
ಚಾಲನೆ: ಒಪೆಕ್ ಆಸ್ಪತ್ರೆ ಮುಚ್ಚಿ ವರ್ಷಕ್ಕಿಂತ ಹೆಚ್ಚಿನ ಅವಧಿ ಕಳೆದಿದೆ. ರಾಜ್ಯ ಸರ್ಕಾರ ರಿಮ್ಸ್ ಅಡಿ ಒಪೆಕ್ ಆಸ್ಪತ್ರೆ ಪುನಾರಂಭಿಸುವ ಭರವಸೆ ನೀಡಿತ್ತು. ಅದರಂತೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆದರೆ ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಸಿಐ ಸೂಚಿಸಿದ ನ್ಯೂನತೆಗಳ ನಿವಾರಣೆಗೆ ಒಪೆಕ್ ಆಸ್ಪತ್ರೆ ಬಳಕೆ ಮಾಡಿಕೊಳ್ಳುವ ತಂತ್ರಕ್ಕೆ ಸರ್ಕಾರ ಮುಂದಾಗಿದೆ ಎಂದು ಒಪೆಕ್ ಆಸ್ಪತ್ರೆ ಸಿಬ್ಬಂದಿಯ ಆರೋಪ.
 ಹಾಗಾಗಿ ಸಿಬ್ಬಂದಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಕನ್ನಡಪ್ರಭಕ್ಕೆ ಮಂಗಳವಾರ ಸಂಜೆ ಪ್ರತಿಕ್ರಿಯಿಸಿದ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಅವರು, ಒಪೆಕ್ ಆಸ್ಪತ್ರೆಗೆ ಸಂಬಂಧಿಸಿ ಸರ್ಕಾರ ಅನುಸರಿಸುತ್ತಿರುವ ತಂತ್ರದ ಬಗ್ಗೆ ತೀವ್ರ ಅಸಮಾಧಾನವಿದೆ. ರಿಮ್ಸ್ ಅಡಿ ಒಪೆಕ್ ಆರಂಭಿಸುವುದು ಸರ್ವಸಮ್ಮತವಲ್ಲ. ಸಂಘಟನೆಯು ಹೋರಾಟ ಮುಂದುವರಿಸಲಿದೆ.
 ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕಾರ್ಯ ಶೀಘ್ರ ನಡೆಯದಿದ್ದರೆ, ಆ.15ಕ್ಕೆ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರಿಗೆ ಮುತ್ತಿಗೆ ಹಾಕುವುದು ನಿಶ್ಚಿತ ಎಂದು ಎಚ್ಚರಿಸಿದ್ದಾರೆ.
ಮುತ್ತಿಗೆ: ಅದೇ ರೀತಿ ದಸಂಸ ಕಾರ್ಯಕರ್ತರು ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯದ ಪ್ರಕರಣ ಹೆಚ್ಚಳಕ್ಕೆ ಖಂಡಿಸಿ, ಕ್ರಮಕ್ಕೆ ಒತ್ತಾಯಿಸಿ ಸಚಿವರಿಗೆ ಮುತ್ತಿಗೆ ಹಾಕುವುದಾಗಿ ಪ್ರಕಟಿಸಿದ್ದಾರೆ.
 ಹಾಗೆಯೇ ಕರ್ನಾಟಕ ಅಂಗವಿಕಲರ ಒಕ್ಕೂಟವು ವಿಕಲಚೇತನರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಚಿವರಿಗೆ ಮುತ್ತಿಗೆ ಹಾಕುವ ಬೆದರಿಕೆಯೊಡ್ಡಿದೆ.
ಈ ಮಧ್ಯೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಉಮಾಶ್ರೀ ಮತ್ತು ಹಾಲಿ ಉಸ್ತುವಾರಿ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಎರಡು ಬಾರಿ ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.
  ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಐದು ಬಾರಿ ಜಿಲ್ಲಾ ಸಚಿವರ ಬದಲಾವಣೆಯಾಗಿತ್ತು. ಆಗಲೂ ಹಾಗೂ ಈಗಲೂ ಹೊರ ಜಿಲ್ಲೆಯವರೇ ಉಸ್ತುವಾರಿ ಯಾಗಿದ್ದರಿಂದ ಸಹಜವಾಗಿಯೇ ಜಿಲ್ಲೆಯ ಸಮಸ್ಯೆಗಳು ಪರಿಹಾರ ಕಾಣುತ್ತಿಲ್ಲ ಎಂಬ ಕೊರಗು ಜಿಲ್ಲೆಯ ನಿವಾಸಿಗಳದ್ದು.  
 ಅದಕ್ಕೆ ಸಾಕ್ಷಿಯಾಗಿ ಇದುವರೆಗೆ ದುರಸ್ತಿ ಕಾಣದ ಚತುಷ್ಪಥ ರಸ್ತೆ ಸಚಿವರು ಆಗಮಿಸುತ್ತಾರೆಂಬ ಸುದ್ದಿ ತಿಳಿಯುತ್ತಿದ್ದಂತೆಯೇ ದುರಸ್ತಿಗೊಳ್ಳುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಯಾವುದೇ ರೀತಿಯ ತೊಂದರೆಯಾಗದಿರಲೆಂದು ಜಿಲ್ಲಾ ಪೊಲೀಸ್ ಮತ್ತು ಜಿಲ್ಲಾಡಳಿತ ಹೋರಾಟಗಾರರೊಂದಿಗೆ ಸಭೆ ನಡೆಸಿ ಮನಮೊಲಿಕೆ ಕಾರ್ಯ ಮಾಡಿದ್ದಾರೆ. ಆದರೆ ಒಪೆಕ್ ಹೋರಾಟಗಾರರು ಸದ್ಯಕ್ಕೆ ಹೋರಾಟ ಹಿಂತೆಗೆತಕ್ಕೆ ಸಮ್ಮತಿಸುವ ಲಕ್ಷಣಗಳಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement