ದೇವಸ್ಥಾನದಲ್ಲಿ ನಂದಿ ಪ್ರತಿಷ್ಠಾಪನೆ
ಮುದಗಲ್: ಸಮೀಪದ ಕನ್ನಾಪೂರಹಟ್ಟಿ ಗ್ರಾಮದ ಅನತಿ ದೂರದಲ್ಲಿರುವ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಅವರ ಕುಲದೇವರಾದ ಸಂಗಮನಾಥನ ಜಾತ್ರೆ ಅತ್ಯಂತ ಸಂಭ್ರಮ ಸಡಗರದಿಂದ ನೆರವೇರಿತು. ಜಾತ್ರೆಯ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ನಂದಿ (ಬಸವಣ್ಣನ ಮೂರ್ತಿ) ಪ್ರತಿಷ್ಠಾಪಿಸಲಾಯಿತು.
ಜಾತ್ರೆಯ ಅಂಗವಾಗಿ ಕನ್ನಾಪೂರಹಟ್ಟಿ ಗ್ರಾಮದ ಅನತಿ ದೂರದಲ್ಲಿರುವ ಮುದಗಲ್ ಕುಡಿವ ನೀರಿನ ಜಲಶುದ್ಧೀಕರಣ ಘಟಕದ ಮುಂದೆ ಇರುವ ಸಂಗಮನಾಥನ ದೇವಾಲಯದಲ್ಲಿ ವಿಶೇಷ ಪೂಜೆ ಅಲಂಕಾರಗಳು ಜರುಗಿದವು. ಗ್ರಾಮದ ಜನತೆ ಗ್ರಾಮದಿಂದ ದೇವಸ್ಥಾನದವರೆಗೆ ಕಳಸದ ಮೆರವಣಿಗೆಯನ್ನು ಡೊಳ್ಳು ಕುಣಿತ, ಭಜನೆ, ಸುಮಂಗಲೆಯರ ಕಳಸದೊಂದಿಗೆ ತರಲಾಯಿತು. ಕಳಸಕ್ಕೆ ಪೂಜೆ ಸಲ್ಲಿಸಿ ದೇವಸ್ಥಾನದ ಗೋಪುರಕ್ಕೆ ಕಳಸಾರೋಹ ನೆರವೇರಿಸಿದರು.
ಜಾತ್ರೆಯಲ್ಲಿ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಹಾಗೂ ಕೆಪಿಸಿಸಿ ಸದಸ್ಯ ಶರಣಗೌಡ ಬಯ್ಯಾಪುರ ಕುಟುಂಬ ಪರಿವಾರದೊಂದಿಗೆ ಆಗಮಿಸಿ ಜಾತ್ರೆಯ ನೇತೃತ್ವವನ್ನು ವಹಿಸಿದ್ದರು. ಅಹಿಂದ ಮುದಗಲ್ ಘಟಕದ ಅದ್ಯಕ್ಷ ರಾಮಣ್ಣ ಹಿರೇಮನಿ, ಕಾಂಗ್ರೆಸ್ ಮುಖಂಡ ಡಿ.ಎಸ್. ಹೂಲಗೇರಿ, ಮುದಗಲ್ ಬ್ಲಾಕ್ ಅಧ್ಯಕ್ಷ ಮುನ್ವರಖಾನ್, ಸುರೇಂದ್ರಗೌಡ ಆದಾಪೂರ, ಮಹಾಂತೇಶ ಪಾಟೀಲ, ಚೆನ್ನವೀರನಗೌಡ ಪಾಗದ, ಚೆನ್ನಬಸನಗೌಡ ಕನ್ನಾಳ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಅಮೀರಬೇಗ್ ಉಸ್ತಾದ್, ಕನ್ನಾಪುರಹಟ್ಟಿಯ ಮುಖಂಡರು, ಮತ್ತಿತರರು ಭಾಗವಹಿಸಿದ್ದರು.