ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

...ಸರ್ವರಿಗೂ ಸಮಪಾಲಿಗೆ ಸರ್ಕಾರ ಬದ್ಧ

Lingaraj Badiger
Updated On : 16 Aug 2013, 11:10 am

ಕನ್ನಡಪ್ರಭ ವಾರ್ತೆ, ರಾಯಚೂರು, ಆ.15
ರಾಜ್ಯ ಸರ್ಕಾರ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ಎಲ್ಲರ ಏಳ್ಗೆಗೆ ಶ್ರಮಿಸಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಅಭಿವೃದ್ಧಿಯತ್ತ ಸಾಗಲು ಸಹಕಾರ ನೀಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಕರೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 67ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ರಾಜ್ಯ ಸರ್ಕಾರ ಬಡವರ ಪರ ಆಡಳಿತ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳು ಜಾರಿಯಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.
ಜನಪರ ಯೋಜನೆಗಳು: ಅನ್ನಭಾಗ್ಯ ಯೋಜನೆ ಅಡಿ ಜಿಲ್ಲೆಯಲ್ಲಿ 706 ನ್ಯಾಯಬೆಲೆ ಅಂಗಡಿಗಳ ಮೂಲಕ 54,124 ಅಂತ್ಯೋದಯ ಮತ್ತು 2,16,650 ಬಿಪಿಎಲ್ ಪಡಿತರ ಚೀಟಿದಾರರಿಗೆ ಯೋಜನೆಯ ಪ್ರಯೋಜನ ದೊರೆತಿದೆ. ಅದೇ ರೀತಿ ಕ್ಷೀರಭಾಗ್ಯ ಯೋಜನೆಯ ಮೂಲಕ ಮಕ್ಕಳಲ್ಲಿನ ಅಪೌಷ್ಟಿಕತೆಯ ಸಮಸ್ಯೆ ನಿವಾರಿಸುವ ಕಾರ್ಯ ಜಾರಿಯಲ್ಲಿದೆ. ಈ ಯೋಜನೆ ಅಡಿ ಒಟ್ಟು ಅಂಗನವಾಡಿ ಕೇಂದ್ರಗಳಲ್ಲಿನ 2,19,683 ಮಕ್ಕಳು ಹಾಗೂ 2,69,908 ಪ್ರೌಢಶಾಲೆವರೆಗಿನ ಮಕ್ಕಳು ಲಾಭ ಪಡೆಯುತ್ತಿದ್ದಾರೆಂದು ಹೇಳಿದರು.
ಶೀಘ್ರದಲ್ಲೇ ಹೈ.ಕ.ಕ್ಕೆ ಸವಲತ್ತು: ಕೇಂದ್ರ ಸರ್ಕಾರ ಹೈ.ಕ. ಭಾಗದ ಪ್ರಗತಿಗೆ ಪೂರಕವಾಗಿ 371(ಜೆ)ನೇ ಕಲಂ ಜಾರಿಗೆ ಕ್ರಮ ಕೈಗೊಂಡಿದೆ. ಅದರಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಈಗಾಗಲೇ ಹೈ.ಕ. ಭಾಗದ ಬೇಕು ಬೇಡಗಳನ್ನು ಸಂಪುಟ ಉಪಸಮಿತಿ ಮೂಲಕ ಕರಡು ವರದಿ ತಯಾರಿಸಿ ಸಮ್ಮತಿಸಿದ್ದು ಶೀಘ್ರದಲ್ಲಿಯೇ ಎಲ್ಲ ಸವಲತ್ತುಗಳು ಈ ಭಾಗದ ಜನತೆಗೆ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು.
ಬಡವರಿಗೂ ಉನ್ನತ ವೈದ್ಯಕೀಯ ಸೌಲಭ್ಯ: ಬಹುಬೇಡಿಕೆಯ ಒಪೆಕ್ ಆಸ್ಪತ್ರೆಯನ್ನು ರಿಮ್ಸ್ ಅಡಿ ಆರಂಭಿಸಿ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಕಡಿಮೆ ವೆಚ್ಚದಲ್ಲಿ ಉನ್ನತ ವೈದ್ಯಕೀಯ ಸೌಲಭ್ಯಗಳು ಬಡವರಿಗೆ ದೊರಕಬೇಕೆಂಬುದು ಸರ್ಕಾರ ಆಶಯವಾಗಿದೆ ಎಂದರು.
ಒಪೆಕ್ ಆಸ್ಪತ್ರೆ ದುರಸ್ತಿಗೆ ಈಗಾಗಲೇ ಸರ್ಕಾರ 150 ಲಕ್ಷದಲ್ಲಿ ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆದಿದ್ದು, ಸದ್ಯದಲ್ಲಿಯೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ. ರೋಗಿಗಳಿಗೆ ಅವಶ್ಯಕ ವೆಂಟಿಲೇಟರ್, ಪಲ್ಸ್ ಅಕ್ಸಮೀಟರ್, ಕಾರ್ಡಿಯಾಕ್ ಮಾನಿಟರ್ ಸೇರಿ ವಿವಿಧ ವೈದ್ಯಕೀಯ ಉಪಕರಣಗಳನ್ನು 6 ಕೋಟಿ ವೆಚ್ಚದಲ್ಲಿ ಖರೀದಿಸಲು ನಿರ್ಧರಿಸಿದ್ದು ಕೂಡಲೇ ಈ ಬಗ್ಗೆ ಪ್ರಗತಿ ಸಾಧಿಸಲಾಗುತ್ತಿದೆ ಎಂದು ಹೇಳಿದರು.
ಈಜುಕೊಳ ಉನ್ನತೀಕರಣ ಪೂರ್ಣ: ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಜಿಲ್ಲಾ ಕ್ರೀಡಾಂಗಣದ ಪುನಾ ನಿರ್ಮಾಣ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಈಗಿನ ಈಜುಕೊಳದ ಉನ್ನತೀಕರಣ ಕಾಮಗಾರಿ 474.8 ಲಕ್ಷ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ದೇವದುರ್ಗ, ಸಿಂಧನೂರುಗಳಲ್ಲಿ ಕ್ರೀಡಾಂಗಣಗಳು ನಿರ್ಮಾಣಗೊಂಡಿದ್ದು, ಲಿಂಗಸ್ಗೂರಿನಲ್ಲಿ 92.65 ಲಕ್ಷ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಪ್ರತಿ ಗ್ರಾಪಂ ಮಟ್ಟದಲ್ಲಿ 1 ಲಕ್ಷ ವೆಚ್ಚದಲ್ಲಿ ಮೈದಾನ ಮತ್ತು ಇತರೆ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆಯನ್ನು ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದರು.
ಶೈಕ್ಷಣಿಕ ಕಾರ್ಯಕ್ರಮ: ಜಿಲ್ಲೆಗೆ ಪ್ರಸಕ್ತ ವರ್ಷ ಮಾಧ್ಯಮಿಕ ಶಿಕ್ಷಣ ಯೋಜನೆ ಅಡಿ 433 ಕೊಠಡಿಗಳು ಮಂಜೂರಾಗಿವೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಅಡಿ 2 ಹೊಸ ಶಾಲೆಗಳು ಮಂಜೂರಾಗಿದ್ದು, 220 ಪ್ರೌಢಶಾಲಾ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ವಿವರಿಸಿದ ಅವರು, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಅನುಕೂಲಕ್ಕೆ ವಿದ್ಯಾರ್ಥಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿ ವೇತನ, ಉಚಿತ ತರಬೇತಿಯಂಥ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಕೂಲಿಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸುವುದು ಮೊದಲಾದ್ಯತೆಯಾಗಿದೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಇದಕ್ಕೂ ಪೂರ್ವದಲ್ಲಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಪೊಲೀಸ್, ಗೃಹ ರಕ್ಷಕ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ ಸೇರಿ ವಿವಿಧ ಶಾಲಾ ಮಕ್ಕಳಿಂದ ಗೌರವ ಸ್ವೀಕರಿಸಿದರು. ಈ ವೇಳೆ ಶಾಲಾ ಮಕ್ಕಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಸಮಾರಂಭದಲ್ಲಿ ಶಾಸಕರಾದ ಡಾ. ಶಿವರಾಜ್ ಪಾಟೀಲ್, ತಿಪ್ಪರಾಜು ಹವಾಲ್ದಾರ್, ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಜಿಪಂ ಸಿಇಒ ಮುದ್ದುಮೋಹನ್, ಎಸ್ಪಿ ಎಸ್.ಬಿ. ಬಿಸನಳ್ಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement