ಒಪೆಕ್ ಪುನಾರಂಭಕ್ಕೆ ಒತ್ತಾಯ: ರೈತ ಸಂಘದಿಂದ ಧರಣಿ
ಕನ್ನಡಪ್ರಭ ವಾರ್ತೆ, ರಾಯಚೂರು, ಆ.15
ನಗರದ ಒಪೆಕ್ ಆಸ್ಪತ್ರೆಯ ಪುನಾರಂಭ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಗುರುವಾರ ಕರ್ನಾಟಕ ರೈತಸಂಘ ಹಾಗೂ ಟಿಯುಸಿಐ ಕಾರ್ಯಕರ್ತರು ಧರಣಿ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಿದ ನೂರಾರು ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್‌ಗೆ ಮನವಿ ಸಲ್ಲಿಸಿ, ಕಳೆದೊಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಒಪೆಕ್ ಆಸ್ಪತ್ರೆ ಮುಚ್ಚಿದೆ. ಅದರಿಂದ ಬಡವರು ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆಂದು ಆರೋಪಿಸಿದರು.
ಭರವಸೆ ಕಾಲಹರಣ: ಆಸ್ಪತ್ರೆಯನ್ನು ಪುನಾರಂಭಿಸುವಂತೆ ಸಂಘಟನೆಯು ನಡೆಸಿದ ಹೋರಾಟದ ಸಂದರ್ಭಗಳಲ್ಲಿ ಸರ್ಕಾರ ಮತ್ತು ಆಸ್ಪತ್ರೆಯ ವಿಶೇಷಾಧಿಕಾರಿ ಡಾ.ಶಂಕರ ಮಲಪುರೆ ಶೀಘ್ರದಲ್ಲಿಯೇ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ ಎಂಬ ಭರವಸೆ ನೀಡುತ್ತಲೇ ಕಾಲಹರಣ ಮಾಡುತ್ತಿದ್ದು, ಆಸ್ಪತ್ರೆ ಮಾತ್ರ ಆರಂಭವಾಗಿಲ್ಲ ಎಂದು ಟೀಕಿಸಿದರು.
ಕಳೆದ 8 ತಿಂಗಳಿನಿಂದ ಈ ರೀತಿಯ ಹೇಳಿಕೆ ನೀಡುವುದರಲ್ಲಿಯೇ ಕಾಲಹರಣ ಮಾಡುತ್ತಿರುವ ಸರ್ಕಾರದ ವರ್ತನೆ ಸರಿಯಲ್ಲ. ಈ ಮೊದಲು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 286 ಜನ ಸಿಬ್ಬಂದಿಯ ಪುನಾ ನೇಮಕ ವಿಳಂಬ ಮಾಡಲಾಗುತ್ತಿದ್ದು ಅದರಿಂದ ಈ ಸಿಬ್ಬಂದಿಯ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಆರೋಪಿಸಿದರು.
ಸಂಘಟನೆಗಳ ವಿರೋಧ: ರಿಮ್ಸ್ ವೈದ್ಯಕೀಯ ಕಾಲೇಜಿನ ಅಡಿ ಒಪೆಕ್ ಆಸ್ಪತ್ರೆ ನಿರ್ವಹಣೆಗೆ ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ. ಆದರೆ ಅದಕ್ಕೆ ಸಂಘಟನೆಯು ಅವಕಾಶ ನೀಡುವುದಿಲ್ಲ. ಸದ್ಯ ಭಾರತೀಯ ವೈದ್ಯಕೀಯ ಮಂಡಳಿಯು ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಈಚೇಗೆ ಸೂಚಿಸಿದ್ದ ನ್ಯೂನತೆಗಳನ್ನು ಸರಿಪಡಿಸಲು ಸರ್ಕಾರ ಒಪೆಕ್ ಆಸ್ಪತ್ರೆ ಆರಂಭಿಸುವ ಕಾರ್ಯ ಮಾಡುತ್ತಿದೆ. ಆದರೆ ಅಂಥ ಯಾವುದೇ ಕ್ರಮಕ್ಕೆ ಸಂಘಟನೆಗಳ ವಿರೋಧವಿದೆ ಎಂದು ಎಚ್ಚರಿಸಿದರು.
ಒಪೆಕ್ ಆಸ್ಪತ್ರೆಯು ಪುನಾರಂಭವಾಗಿ ಈ ಭಾಗದಲ್ಲಿನ ಬಿಪಿಎಲ್ ಕಾರ್ಡುದಾರರು ಹಾಗೂ ಬಡವರಿಗೆ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೌಲಭ್ಯಗಳು ದೊರೆಯುವಂತಾಗಬೇಕಿದೆ. 11 ವರ್ಷ ಈ ಆಸ್ಪತ್ರೆಯಲ್ಲಿ ದುಡಿದ ಸಿಬ್ಬಂದಿಯನ್ನು ಪುನಾ ನೇಮಿಸಿಕೊಳ್ಳಬೇಕೆಂದು ಹೋರಾಟಗಾರರು ಒತ್ತಾಯಿಸಿದರು.
ರಾಜ್ಯ ಸರ್ಕಾರ ಸದ್ಯ ರಿಮ್ಸ್ ಅಡಿ ಒಪೆಕ್ ಆರಂಭಿಸುವ ನಿಟ್ಟಿನಲ್ಲಿ ರಿಮ್ಸ್‌ಗೆ ಕೋಟ್ಯಂತರ ರು. ಒದಗಿಸುತ್ತಿದೆ. ಒಪೆಕ್ ಆರಂಭಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಸರ್ಕಾರದ ಈ ರೀತಿಯ ವರ್ತನೆ ಹೋರಾಟಗಾರರ ತಾಳ್ಮೆ ಪರೀಕ್ಷಿಸುತ್ತಿದೆ ಎಂದು ಎಚ್ಚರಿಸಿದರು.
11 ವರ್ಷದಿಂದ ಅಲ್ಲಿ ಕಾರ್ಯನಿರ್ವಹಿಸಿದ್ದ 286 ಜನ ಸಿಬ್ಬಂದಿಗೆ ಪುನಾ ನೇಮಿಸಬೇಕು. ರಿಮ್ಸ್ ಹೆಸರಿನಲ್ಲಿ ಒಪೆಕ್ ಮುಚ್ಚುವ ಯಾವುದೇ ಹುನ್ನಾರ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು.
286 ಸಿಬ್ಬಂದಿ ಭಾಗಿ: ಈ ಸಂದರ್ಭದಲ್ಲಿ ರೈತಸಂಘದ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ, ತಾಲೂಕು ಅಧ್ಯಕ್ಷ ರಾಜಶೇಖರ್. ಚಿನ್ನಪ್ಪ ಕೊಟ್ರಿಕಿ ಸೇರಿದಂತೆ ಒಪೆಕ್ ಆಸ್ಪತ್ರೆಯ 286 ಜನ ಸಿಬ್ಬಂದಿ ಪಾಲ್ಗೊಂಡಿದ್ದರು.
ವಾಗ್ವಾದ: ಇದಕ್ಕೂ ಮುನ್ನ ಅಂಬೇಡ್ಕರ್ ವೃತ್ತದಲ್ಲಿ ರೈತಸಂಘದ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ತಮ್ಮನ್ನು ಭೇಟಿ ಮಾಡಿದ ನಂತರವೇ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಿ ಧ್ವಜಾರೋಹಣ ನೆರವೇರಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಎಎಸ್ಪಿ ಡಾ. ದಿವ್ಯಾ ಗೋಪಿನಾಥ್ ಅವರು ಸಚಿವರ ಕಾರ್ಯಕ್ರಮಕ್ಕೆ ಯಾವುದೇ ರೀತಿಯಿಂದ ತೊಂದರೆಯಾಗಲು ಅವಕಾಶ ನೀಡುವುದಿಲ್ಲ. ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದರಿಂದ ಆಕ್ರೋಶಗೊಂಡ ಹೋರಾಟಗಾರರು ಮತ್ತು ಡಾ. ದಿವ್ಯಾ ಗೋಪಿನಾಥ ಮಧ್ಯೆ ವಾಗ್ವಾದ ನಡೆಯಿತು.