ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಖಾತ್ರಿ' ಸಮರ್ಪಕ ಅನುಷ್ಠಾನಕ್ಕೆ ಆಗ್ರಹ: ಅಹೋರಾತ್ರಿ ಧರಣಿ

Lingaraj Badiger
Updated On : 16 Aug 2013, 11:08 am

ಕನ್ನಡಪ್ರಭ ವಾರ್ತೆ, ರಾಯಚೂರು, ಆ.15
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಕಾರ್ಯಕರ್ತರು ಗುರುವಾರ ನಗರದಲ್ಲಿ ಅಹೋರಾತ್ರಿ ಧರಣಿ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನ ಮೂಲಕ ಎಲ್ಲ ಕೂಲಿಕಾರ್ಮಿಕರಿಗೆ ಉದ್ಯೋಗ ದೊರಕಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿದರು.
ಕೂಲಿಕಾರ್ಮಿಕರಿಗೆ ತೊಂದರೆ: ಕಳೆದ ಅನೇಕ ತಿಂಗಳಿನಿಂದ ಸಂಘಟನೆಯು ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕ ಕೂಲಿ ಪಾವತಿ, ನಿರುದ್ಯೋಗ ಭತ್ಯೆ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಅದರಿಂದ ಕೂಲಿಕಾರ್ಮಿಕರಿಗೆ ಬದುಕು ನಡೆಸಲು ತೊಂದರೆಯಾಗುತ್ತಿದೆ ಎಂದು ದೂರಿದರು.
150 ದಿನಕ್ಕೆ ಕೂಲಿ ನೀಡಿ: ಖಾತ್ರಿ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ 100ದಿನ ಕೂಲಿ ಕೆಲಸ ನೀಡಬೇಕೆಂದಿದೆ. ಈಗಾಗಲೇ ರಾಜಸ್ಥಾನ್ ಮತ್ತು ಆಂಧ್ರ ಸರ್ಕಾರಗಳು ಈ ಪ್ರಮಾಣವನ್ನು 100ರಿಂದ 150 ದಿನಕ್ಕೆ ಹೆಚ್ಚಿಸಲಾಗಿದೆ. ಅದೇ ಮಾದಿರಿಯಲ್ಲಿ ರಾಜ್ಯದಲ್ಲಿಯೂ ಸರ್ಕಾರ 150 ದಿನಕ್ಕೆ ಕೂಲಿ ಕೆಲಸ ನೀಡುವ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಹಾರಧಾನ್ಯ: ಪ್ರತಿ ಕುಟುಂಬಕ್ಕೆ 1 ದರದಲ್ಲಿ ಅಕ್ಕಿ ವಿತರಿಸುವಂತೆ ಅದರ ಜತೆಜತೆಗೆ ಸ್ಥಳೀಯ ಆಹಾರಧಾನ್ಯ ಜೋಳ ಮತ್ತು ಬೇಳೆ ಕಾಳುಗಳನ್ನು 1 ಕೆಜಿ ದರದಲ್ಲಿ ವಿತರಿಸಬೇಕು. ರಾಜ್ಯದ ಹಳ್ಳಿಗಳಲ್ಲಿ ಮದ್ಯದ ಮಾರಾಟದಿಂದ ಕೌಟುಂಬಿಕ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಅದರಿಂದ ಬಡವರು ಬೀದಿಗೆ ಬರುವಂತಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟ ಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿದರು. ಸದ್ಯ ಜಾರಿಯಲ್ಲಿರುವ ಮಾಹಿತಿ ಹಕ್ಕು ಕಾಯಿದೆಯಿಂದ ಸಾಕಷ್ಟು ಅಕ್ರಮಗಳ ಪತ್ತೆಗೆ ನೆರವಾಗಿದೆ. ಕಾರಣ ಯಾವುದೇ ರೀತಿಯಿಂದಲೂ ಕಾಯಿದೆ ಮಾರ್ಪಾಟು ಮಾಡುವುದನ್ನು ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿದರು. ಸಂಘಟನೆಯ ಪ್ರಮುಖರಾದ ಶಾಂಭವಿ, ಹನ್ಮಂತಿ, ಲಕ್ಷ್ಮಿ, ಕೊಂಡಯ್ಯ, ಶರಣಮ್ಮ ಸೇರಿ ಅನೇಕರಿದ್ದರು.

ಕೃವಿವಿ ಹಂಗಾಮಿ ನೌಕರರ ಧರಣಿ
ರಾಯಚೂರು: ರಾಯಚೂರು ಕೃಷಿ ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 828 ಕಾರ್ಮಿಕರಿಗೆ ಮಾಸಿಕ ವೇತನವನ್ನು ಸದ್ಯದ ದರದಲ್ಲಿಯೇ ಪ್ರತಿ ತಿಂಗಳು ಪಾವತಿಸಬೇಕು. ಕಾರ್ಮಿಕರ ವೇತನವನ್ನು ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೃಷಿ ವಿವಿ ಹಂಗಾಮಿ ನೌಕರರ ಸಂಘದ ಕಾರ್ಯಕರ್ತರು ಧರಣಿ ನಡೆಸಿದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಧರಣಿ ನಡೆಸಿ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ರಿಗೆ ಮನವಿ ಸಲ್ಲಿಸಿ, ಕೃಷಿ ವಿವಿ ಆಡಳಿತವು ವಿದ್ಯಾರ್ಥಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ವೇತನ ನೀಡುತ್ತಿಲ್ಲ. ಇದರಿಂದ ಅವರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕಾರಣ ಕೂಡಲೇ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ವೇತನ ಪಾವತಿಸಲು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement