ಬಲಿಷ್ಠ ಭಾರತ ನಿರ್ಮಾಣಕ್ಕೆ ಸಂಕಲ್ಪ ತೊಡಿ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಆ.15
ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಿದ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸೇನಾನಿಗಳ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸುಭದ್ರ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ನಾವೆಲ್ಲ ಸಂಕಲ್ಪ ತೊಡಬೇಕೆಂದು ಸಹಾಯಕ ಆಯುಕ್ತ ಟಿ. ಯೋಗೇಶ್ ತಿಳಿಸಿದರು.
ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ 67ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗುರುವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿಶ್ವಕ್ಕೆ ಶಾಂತಿ, ಸಹನೆ, ಉನ್ನತಾದರ್ಶಗಳನ್ನು ಸಾರಿದ ಅಸಂಖ್ಯಾತ ದಾರ್ಶನಿಕರ, ವೇದೋಪನಿಷತ್ತುಗಳ, ಸರ್ವಧರ್ಮಗಳ ಹಾಗೂ ನಮ್ಮ ಹಿರಿಯರು ಹಾಕಿಕೊಟ್ಟ ತತ್ವಾದರ್ಶಗಳನ್ನು ನೆನೆದು ಸತ್ಯ, ಅಹಿಂಸೆ, ಶಾಂತಿಯ ಪಾಲನೆಯ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ದೇಶದ ಸಾರ್ವಭೌಮತೆ ರಕ್ಷಿಸಿ: ದೇಶದಲ್ಲಿನ ಪ್ರತ್ಯೇಕತಾ ಕೂಗುಗಳನ್ನು ದಮನ ಮಾಡಿ, ನಕ್ಸಲ್‌ವಾದ, ಭಯೋತ್ಪಾದನೆ, ಜಾತೀಯತೆ ಮುಂತಾದ ಅಮಾನವೀಯ ಚಟುವಟಿಕೆಗಳನ್ನು ನಿಗ್ರಹಿಸಿ ದೇಶದ ಸಾರ್ವಭೌಮತೆ ಗರಿಮೆಯನ್ನು ಎತ್ತಿ ಹಿಡಿಯಲು ಶ್ರಮಿಸಬೇಕು.
ಆಧುನಿಕ ಕೃಷಿಯನ್ನು ಅಳವಡಿಸಿಕೊಂಡು ಆಹಾರೋತ್ಪಾದನೆ ಹೆಚ್ಚಿಸಬೇಕಿದೆ. ಜನಸಂಖ್ಯೆ ನಿಯಂತ್ರಿಸಿ ಮಾನವ ಹಾಗೂ ಪ್ರಾಕೃತಿಕ ಸಂಪನ್ಮೂಲಗಳ ಸಮರ್ಪಕವಾಗಿ ಬಳಕೆಗೆ ಸಿದ್ಧಗೊಳಿಸಬೇಕಿದೆ. ಕೈಗಾರಿಕೀಕರಣದಿಂದ ಉದ್ಯೋಗ ಸೃಷ್ಟಿಸಿ ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಿ ವಿದೇಶಿ ಅವಲಂಬನೆ ತಪ್ಪಿಸಲು ಯುವ ಸಮುದಾಯ ದೇಶಭಕ್ತಿ, ಅಭಿಮಾನ, ಉತ್ಸಾಹದಿಂದ ಸಾಹಸಿ ಪ್ರವೃತ್ತಿ ರೂಢಿಸಿಕೊಂಡು ಅಭಿವೃದ್ಧಿಯ ಹಾದಿಯ ವೇಗ ಹೆಚ್ಚಿಸಬೇಕೆಂದು ಕರೆ ನೀಡಿದರು.
ರಾಷ್ಟ್ರನಾಯಕರ ಆದರ್ಶ ಮೈಗೂಡಿಸಿಕೊಳ್ಳಬೇಕು: ಸ್ವಾತಂತ್ರ್ಯದ ನಂತರ ನೆರೆ ದೇಶಗಳ ಪಿತೂರಿಯನ್ನು ಯಶಸ್ವಿಯಾಗಿ ಹತ್ತಿಕ್ಕುತ್ತಾ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಾ ಬಂದಿದ್ದು, ದೇಶವು ಕೃಷಿ, ವಿಜ್ಞಾನ, ಬಾಹ್ಯಾಕಾಶ, ತಂತ್ರಜ್ಞಾನ, ಕೈಗಾರಿಕಾ ರಂಗಗಳಲ್ಲಿ ಪ್ರಗತಿಯತ್ತ ಸಾಗುತ್ತಿದೆ. ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯ ಜೊತೆಗೆ ರಾಷ್ಟ್ರ ನಾಯಕರ ಆದರ್ಶ, ಹಿರಿಮೆಗಳ ಮೌಲ್ಯಗಳನ್ನು ಸಾಕಾರಗೊಳಿಸಲು ನಾವೆಲ್ಲ ಇನ್ನೂ ಶ್ರಮಿಸಬೇಕಿದೆ ಎಂದು ಹೇಳಿದರು.
ಧ್ವಜಾರೋಹಣ ಸಮಾರಂಭದಲ್ಲಿ ಶಾಸಕ ಮಾನಪ್ಪ ವಜ್ಜಲ್, ತಾಪಂ ಅಧ್ಯಕ್ಷೆ ಲಲಿತಮ್ಮ ಶಿವನಗೌಡ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಜಂಬನಗೌಡ ಕಾಚಾಪೂರ, ತಹಸೀಲ್ದಾರರಾದ ಎನ್.ಬಿ.ಪಾಟೀಲ್, ಜಿ.ಎಸ್. ಮಹಾಜನ್, ಡಿವೈಎಸ್ಪಿ ಸೂರ್ಯವಂಶಿ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ವೀರಭದ್ರಪ್ಪ ಇದ್ದರು.
ಸನ್ಮಾನ: ಇದೇ ವೇಳೆ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಿದ ಸಂದರ್ಭದಲ್ಲಿ ನಡುಗಡ್ಡೆಯ ಮ್ಯಾದರಗಡ್ಡಿ ಮತ್ತು ಕರಕಲಗಡ್ಡಿ ನಿವಾಸಿಗಳ ರಕ್ಷಣೆಗೆ ತಾಲೂಕು ಆಡಳಿತಕ್ಕೆ ಸಹಕಾರ ನೀಡಿದ ದೇವಪ್ಪ ಸಂಗಪ್ಪ ಭೂಪುರ ಯುವಕನನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು. ಸಮಾರಂಭದ ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.