ಸ್ವಾತಂತ್ರ್ಯ ಸಂಭ್ರಮಕ್ಕೆ ಕರಾಳ ಛಾಯೆ
ಕನ್ನಡಪ್ರಭ ವಾರ್ತೆ, ರಾಯಚೂರು, ಆ.15
ಆಡಳಿತದ ನಿರ್ಲಕ್ಷ್ಯಕ್ಕೆ ಈಡೇರದ ಬೇಡಿಕೆಗಳು. ಸ್ವಾತಂತ್ರ್ಯೋತ್ಸವದ ಸಂಭ್ರಮ ಮರೆಯಾಗಿ ನಡೆದಿದ್ದು ಸಾಲು ಸಾಲು ಹೋರಾಟಗಳು. ಒಂದೆಡೆ ತಿರಂಗಾ ಧ್ವಜ ಹಾರಾಡುತ್ತಿದ್ದರೆ ಮತ್ತೊಂದೆಡೆ ವಿವಿಧ ಸಂಘಟನೆಗಳ ಕೆಂಪು ಬಾವುಟ, ಕಪ್ಪು ಪಟ್ಟಿಯ ಪ್ರದರ್ಶನ ಮತ್ತು ಆಡಳಿತ ವಿರೋಧಿ ಘೋಷಣೆಗಳ ಆಕ್ರೋಶ.
ನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವದ ಸಂಭ್ರಮದ ದಿನದಂದು ಕಂಡುಬಂದ ದೃಶ್ಯವಿದು.
ಬಡವರ ಆಶಾಕಿರಣ: ಕಳೆದ ಅನೇಕ ತಿಂಗಳುಗಳ ಹೋರಾಟದ ಕಾವು ಸ್ವಾತಂತ್ರ್ಯ ಸಂಭ್ರಮದ ಹೊತ್ತಿಗೆ ಹೆಚ್ಚಿತ್ತು. ಸರ್ಕಾರ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಬೇಸತ್ತ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಹೋರಾಟಕ್ಕೆ ಸ್ವಾತಂತ್ರ್ಯ ದಿನವನ್ನೇ ಆಯ್ದುಕೊಂಡಿದ್ದರಿಂದ ಸ್ವಾತಂತ್ರ್ಯ ಸಂಭ್ರಮ ಮರೆಯಾಗಿತ್ತು. ಕರಾಳ ಛಾಯೆ ಎಲ್ಲೆಡೆಯಿತ್ತು.
ಕಳೆದೊಂದು ವರ್ಷಕ್ಕೂ ಹೆಚ್ಚಿನ ಕಾಲದಿಂದ ಬಡವರ ಪಾಲಿನ ಏಕೈಕ ಆಶಾಕಿರಣ ಒಪೆಕ್ ಆಸ್ಪತ್ರೆ ಮುಚ್ಚಿದೆ. ಅಂದಿನಿಂದಲೇ ಆಸ್ಪತ್ರೆ ಪುನಾರಂಭ ಮತ್ತು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯ ಪುನಾ ನೇಮಕಕ್ಕೆ ಆಗ್ರಹಿಸಿ ಹತ್ತಾರು ಬಾರಿ ಹೋರಾಟವನ್ನು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ ಮತ್ತಿತರರು ನಡೆಸುತ್ತಲೇ ಬಂದಿದ್ದಾರೆ.
ಆದರೆ ಸರ್ಕಾರ ಮಾತ್ರ ಆಗೊಂದು ಈಗೊಂದು ಗೊಂದಲದ ಹೇಳಿಕೆ ನೀಡಿದ್ದು ಹಾಗೂ ವಿಶೇಷಾಧಿಕಾರಿಯಾಗಿ ನೇಮಕಗೊಂಡವರೂ ಸಹ ಅದೇ ದಾರಿಯಲ್ಲಿ ಸಾಗಿದ್ದು ಹೋರಾಟಗಾರರ ಆಕ್ರೋಶಕ್ಕೆ ದಾರಿ ಮಾಡಿತು.
ಸಚಿವರಿಗೆ ಮುತ್ತಿಗೆ ಯತ್ನ: ಒಪೆಕ್ ಪುನಾರಂಭದ ನೆಪದಲ್ಲಿ ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿನ ನ್ಯೂನತೆ ಸರಿಪಡಿಸುವ ಕಾರ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿ ನೂರಾರು ಹೋರಾಟಗಾರರು ಸ್ವಾತಂತ್ರ್ಯ ದಿನದ ಸಂಭ್ರಮ ಮರೆತು ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಮುತ್ತಿಗೆ ಹಾಕಲು ಮುಂದಾದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.
ಅದೇ ರೀತಿ ಕೃಷಿ ವಿವಿ ಹಂಗಾಮಿ ನೌಕರರ ಸಂಘದವರು ವಿವಿ ಯಲ್ಲಿರುವ 822 ಕಾರ್ಮಿಕರು ಕಡಿಮೆ ದಿನಗೂಲಿಯಲ್ಲಿ ದುಡಿಯುತ್ತಿದ್ದಾರೆ. ವಿವಿಯ ವಿದ್ಯಾರ್ಥಿ ನಿಲಯಗಳಲ್ಲಿ ಕಾರ್ಯನಿರ್ವಹಿಸುವವರಿಗೆ ವೇತನ ನೀಡುತ್ತಿಲ್ಲ. ಈ ಸಮಸ್ಯೆಗಳಿಗೆ ಕೊನೆ ಹಾಡಬೇಕೆಂದು ಆಗ್ರಹಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಹಾಗೆಯೇ ಜನಾರೋಗ್ಯ ಆಂದೋಲನ- ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸಿ ಜಿಲ್ಲೆಯಲ್ಲಿ ಖಾಸಗಿ ಆರೋಗ್ಯ ವ್ಯವಸ್ಥೆಯ ಮೇಲೆ ಕಡಿವಾಣ ಹಾಕಿ ಸುಭದ್ರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸುವಂತೆ ಒತ್ತಾಯಿಸಿದರು.
ಪೊಲೀಸ್ ಪಹರೆ: ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಅಹೋರಾತ್ರಿ ಧರಣಿ ನಡೆಸಲಾಯಿತು. ಅದೇ ರೀತಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಶೇ.3ರಷ್ಟು ಅನುದಾನವನ್ನು ವಿಕಲಚೇತನರಿಗೆ ಮೀಸಲಿರಿಸುವುದನ್ನೇ ಅಧಿಕಾರಿಗಳು ಮರೆತಿದ್ದಾರೆ. ಮೀಸಲಿರಿಸಿದರೂ ಅದರ ಸಮರ್ಪಕ ಬಳಕೆಯಾಗುತ್ತಿಲ್ಲ ಎಂದು ವಿಕಲಚೇತನರೂ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಸಾಲು ಸಾಲು ಹೋರಾಟಗಳು ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಕರಾಳತೆ ತಂದುಕೊಟ್ಟವು. ಅಂಬೇಡ್ಕರ್ ವೃತ್ತದ ಸುತ್ತಲೂ ಬಿಗಿ ಪೊಲೀಸ್ ಪಹರೆ ದಾರಿಹೋಕರಲ್ಲಿ ಆತಂಕಕ್ಕೆ ದಾರಿ ಮಾಡಿತ್ತು. ಸಂಭ್ರಮಕ್ಕೆ ಹಲವು ವರ್ಷಗಳಿಂದ ಈಡೇರದ ಬೇಡಿಕೆಗಳ ಸರಮಾಲೆಯೇ ತೊಡಕಾಗಿದ್ದು ಮಾತ್ರ ಸ್ಪಷ್ಟವಾಗಿತ್ತು.
- ಜಗನ್ನಾಥ ಆರ್. ದೇಸಾಯಿ