ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಧರ್ಮ ನಿರಪೇಕ್ಷ, ಜನತಾಂತ್ರಿಕ ಶಿಕ್ಷಣಕ್ಕೆ ಆಗ್ರಹ

Vishwanath S
Updated On : 17 Aug 2013, 11:11 am

ಕನ್ನಡಪ್ರಭ ವಾರ್ತೆ ,  ರಾಯಚೂರು ,  ಆ.16
ಸಾರ್ವತ್ರಿಕವಾಗಿ ವೈಜ್ಞಾನಿಕ, ಧರ್ಮನಿರಪೇಕ್ಷ, ಜನತಾಂತ್ರಿಕ ಶಿಕ್ಷಣದ ಜಾರಿಗೆ ಆಗ್ರಹಿಸಿ ಹಾಗೂ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ವಿರೋಧಿಸಿ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಆ. 26ರಿಂದ ನಡೆಯಲಿರುವ ಎಐಡಿಎಸ್‌ಒ ಸಂಘಟನೆಯ 8ನೇ ಅಖಿಲ ಭಾರತ ವಿದ್ಯಾರ್ಥಿ ಸಮ್ಮೇಳನದಲ್ಲಿ ನಿರ್ಣಯ ಅಂಗೀಕರಿಸಲಾಗುತ್ತದೆ ಎಂದು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಿ. ರವಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣ ನೀತಿಗಳಿಗೆ ಉತ್ತೇಜಿಸಲು ಸರ್ಕಾರಗಳು ದೇಶದಲ್ಲಿ ಶಿಕ್ಷಣ ನೀಡುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿವೆ. ಅದರಿಂದ ಬಡವರಿಗೆ ಶಿಕ್ಷಣ ಕೈಗೆಟುಕದಂಥ ಸ್ಥಿತಿಯಿದೆ ಎಂದು ಆರೋಪಿಸಿದರು.
ಲಕ್ಷಾಂತರ ಶಿಕ್ಷಕರ ಹುದ್ದೆ ಖಾಲಿ: ಹಣಕಾಸಿನ ಕೊರತೆಯ ನೆಪದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 4 ಲಕ್ಷ ಮತ್ತು ಪ್ರಾಥಮಿಕ ಶಾಲೆಗಳಲ್ಲಿ 19 ಲಕ್ಷ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಹೆಚ್ಚಿನ ಸಂಸ್ಥೆಗಳು ಅರೆಕಾಲಿಕ ಶಿಕ್ಷಕರಿಂದಲೇ ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣದ ವ್ಯಾಪಾರೀಕರಣದ ಫಲವಾಗಿ ಪರೀಕ್ಷೆಗಳ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಬಯಲು, ನಕಲಿ ಅಂಕಪಟ್ಟಿ ಜಾಲ, ಹಣಕ್ಕಾಗಿ ಅಂಕ ನೀಡಿಕೆಯಂಥ ಅಕ್ರಮಗಳು ಬಯಲಾಗುತ್ತಿವೆ ಎಂದು ದೂರಿದರು.
ಶಿಕ್ಷಣದ ಧ್ಯೇಯಕ್ಕೆ ಧಕ್ಕೆ: ಉತ್ತಮ ಉದ್ಯೋಗ, ಹಣ ಗಳಿಕೆಯನ್ನೇ ಶಿಕ್ಷಣ ಪಡೆಯುವಿಕೆಯ ಏಕೈಕ ಉದ್ದೇಶ ಎಂಬಂತೆ ಬಿಂಬಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ಖಾಸಗಿ ಪಾಲುದಾರಿಕೆಯ ನೀತಿ, ಖಾಸಗಿ ಮತ್ತು ವಿದೇಶಿ ವಿವಿ ಮಸೂದೆಗಳು ಶಿಕ್ಷಣವನ್ನು ದುಬಾರಿ ಸರಕಾಗಿಸಲಿವೆ ಎಂದು ಟೀಕಿಸಿದರು.
ಮಸೂದೆಗಳ ತಿರಸ್ಕಾರಕ್ಕೆ ಒತ್ತಾಯ: ಸರ್ಕಾರಗಳು ಎಲ್ಲ ಹಂತಗಳಲ್ಲಿ ಡೊನೇಷನ್, ಕ್ಯಾಪಿಟೇಷನ್ ಹಾವಳಿ ತಡೆಯಬೇಕು. ಶುಲ್ಕ ಏರಿಕೆ ಕೈಬಿಡಬೇಕು. ಖಾಸಗಿ ವಿವಿ ಮಸೂದೆ, ಶೈಕ್ಷಣಿಕ ನ್ಯಾಯ ಮಂಡಳಿ ಕಾಯಿದೆ, ನವೀನ ವಿವಿ ಮಸೂದೆ ಸೇರಿ ಸಂಸತ್ತಿನಲ್ಲಿ ಬಾಕಿಯಿರುವ ಎಲ್ಲ ಮಸೂದೆ ತಿರಸ್ಕರಿಸಬೇಕೆಂದು ಸಮ್ಮೇಳನದಲ್ಲಿ ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ಖಾಲಿ ಹುದ್ದೆಗಳನ್ನು ಕಾಲ ಕಾಲಕ್ಕೆ ಭರ್ತಿ ಮಾಡಬೇಕು. ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಬೇಕು. ಮಾರುಕಟ್ಟೆ ಆಧಾರಿತ ಕೋರ್ಸುಗಳು ಮತ್ತು ಪಠ್ಯಕ್ರಮವನ್ನು ಕೈಬಿಟ್ಟು ಮೂಲ ವಿಜ್ಞಾನ, ಸಾಹಿತ್ಯ ಮತ್ತು ಮಾನವಿಕ ಶಾಸ್ತ್ರಗಳಿಗೆ ಮಹತ್ವ ನೀಡಬೇಕೆಂದು ಸರ್ಕಾರಗಳನ್ನು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬ ಆಚರಿಸಿ: ಪಠ್ಯಕ್ರಮದಲ್ಲಿ ಯಾವುದೇ ಜಾತಿ, ಜನಾಂಗದ ಓಲೈಕೆ ಇಲ್ಲವೇ ತೆಗಳುವಿಕೆಯ ವಿಷಯಗಳನ್ನು ಅಳವಡಿಸುವುದು, ಶಾಲೆಗಳಲ್ಲಿ ಒಂದೇ ಧರ್ಮದ ಪದ್ಧತಿ ಅಳವಡಿಕೆ ಹಬ್ಬಗಳ ಆಚರಣೆಯನ್ನು ಬಿಡಬೇಕು. ಕೇವಲ ರಾಷ್ಟ್ರೀಯ ಹಬ್ಬಗಳನ್ನು ಮಾತ್ರ ಶಾಲೆಗಳಲ್ಲಿ ಆಚರಿಸುವಂತಾಗಬೇಕೆಂದು ಅವರು ಹೇಳಿದರು.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಆ.26ರಿಂದ 28ರವರೆಗೆ ನಡೆಯುವ ಸಮ್ಮೇಳನದಲ್ಲಿ ಸಂಘಟನೆಯು ಮಹತ್ವದ ನಿರ್ಣಯ ಕೈಗೊಳ್ಳಲಿದೆ. ರಾಜ್ಯದಿಂದ ನೂರಾರು ಜನ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮಹೇಶ್ ಚೀಕಲಪರ್ವಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement