ನಕಲಿ ವೈದ್ಯರು, ರಕ್ತ ಪರೀಕ್ಷಾ ಲ್ಯಾಬ್‌ಗೆ ಬೀಗ
ಕನ್ನಡಪ್ರಭ ವಾರ್ತೆ , ಸಿಂಧನೂರು , ಆ.16
ತಾಲೂಕಿನ ನಕಲಿ ವೈದ್ಯರು(ವೈದ್ಯಕೀಯ ಶಿಕ್ಷಣ ಇಲ್ಲದ) ಹಾಗೂ ರಕ್ತ ಪರೀಕ್ಷಾ ಪ್ರಯೋಗಾಲಯ ವರದಿಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವುಂಟು ಮಾಡುತ್ತಿದ್ದುದನ್ನು ಗಮನಿಸಿದ ತಾಲೂಕಾ ಆರೋಗ್ಯಾಧಿಕಾರಿಗಳು ಶುಕ್ರವಾರ ನಗರದ ಆದರ್ಶ ಕಾಲೋನಿಯ ಆಕಾಶ ಪ್ರಯೋಗಾಲಯಕ್ಕೆ ಬೀಗ ಹಾಕಿಸಿದರು.
ಆರ್.ಎಚ್. ನಂ- 5 ಗ್ರಾಮದಲ್ಲಿ ಕಂಡುಬಂದ ಶಂಕಿತ ಡೆಂಘೀ ಜ್ವರ ಪ್ರಕರಣಗಳಿಗೆ ಅಲ್ಲಿಯ ನಕಲಿ ವೈದ್ಯರಾದ ಅಮರ, ದೀಲಿಪ ಬಿಸ್ವಾಸ್, ಜಗನ್ನಾಥ್ ಮುಂತಾದವರು ರೋಗಿಗಳಿಂದ ರಕ್ತ ಮಾದರಿಗಳನ್ನು ಸಂಗ್ರಹಿಸಿ, ಆಕಾಶ ಪ್ರಯೋಗಾಲಯದ ತಂತ್ರಜ್ಞ ಕಳಕಪ್ಪ ಹಾದಿ ಇವರ ಸಹಿಯೊಂದಿಗೆ ತಾವೇ ಪೂರಕವಲ್ಲದ ಚಿಕಿತ್ಸೆ ನೀಡಿ ರೋಗಿಯನ್ನು ಗಂಬೀರ ಪರಿಸ್ಥಿತಿಗೆ ತಳ್ಳುವುದಕ್ಕೆ ಪರೋಕ್ಷವಾಗಿ ಕಾರಣೀಭೂತರಾಗಿದ್ದಾರೆ ಎಂದು ಡಾ. ಸೈಯದ್ ಹಸನ್ ಹುಸೇನ್ ತಿಳಿಸಿದರು.
ಕ್ರಮ ಕೈಗೊಳ್ಳುವ ಎಚ್ಚರಿಕೆ: ಅಲ್ಲದೇ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮದ 2007ರ ಅಡಿಯಲ್ಲಿ ಎಂಬಿಬಿಎಸ್, ಪೆಥಾಲಾಜಿಸ್ಟ್, ಪದವಿ ಪೂರೈಸಿದ ವೈದ್ಯರು ಪ್ರಯೋಗಾಲಯದ ವರದಿಗಳಿಗೆ ಅನುಮೋದನೆಯ ಸಹಿ ಹಾಕುವ ಅಧಿಕಾರವಿರುತ್ತದೆ. ಡಿಎಂಎಲ್‌ಟಿ ಅಥವಾ ಇತರೇ ಯಾವುದೇ ಶಿಕ್ಷಣ ಹೊಂದಿದ್ದರೂ ಸಹಿ ಮಾಡಿ ಅನುಮೋದಿಸುವ ಅಧಿಕಾರವಿರುವುದಿಲ್ಲ. ನಗರದ ಇತರ ಪ್ರಯೋಗಾಲಯಗಳಿಗೂ ಸದ್ಯದಲ್ಲಿ ಭೇಟಿ ನೀಡಿ ಅಧಿಕೃತ ನೋಂದಣೆಯಿಲ್ಲದ ಹಾಗೂ ದಾಖಲಾತಿಗಳಿಲ್ಲದ ಮತ್ತು ಖುದ್ದು ತಾವೇ ಸಹಿ ಮಾಡಿ ವರದಿ ನೀಡುತ್ತಿರುವುದು ಕಂಡುಬಂದಲ್ಲಿ ಕೆಪಿಎಂಇ ಕಾಯ್ದೆ 2007ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಈ ವೇಳೆ ಪ್ರಾಧಿಕಾರದ ಸದಸ್ಯರಾದ ಡಾ. ಕರವೀರಪ್ರಭು ಕ್ಯಾಲ್ಕೊಂಡ, ಹಾಗೂ ಆರೋಗ್ಯ ಇಲಾಖೆಯ ವೈದ್ಯರಾದ ಶಂಕರಚಾರ್ಯ, ಸೌಮ್ಯಶ್ರೀ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಈಶ್ವರ್ ದಾಸಪ್ಪನವರ, ಎ.ಐ. ಪಾಟೀಲ್, ಮಹೆಬೂಬು ಪಾಷಾ ಹಾಜರಿದ್ದರು.