ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬ್ರಾಹ್ಮಣ, ಮತ್ತಿತರೆ ಸಮಾಜದ ಪ್ರತಿಭೆಗಳಿಗೆ ಸನ್ಮಾನ

Vishwanath S
Updated On : 17 Aug 2013, 11:11 am

ಕನ್ನಡಪ್ರಭ ವಾರ್ತೆ ,  ರಾಯಚೂರು ,  ಆ.16
ಬ್ರಾಹ್ಮಣ ಸಮಾಜದ ಹಾಗೂ ಇತರೆ ಜನಾಂಗದ ಉತ್ತಮ ಸಾಧನೆ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿಪ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ.18 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವಲಯ ಉಪಾಧ್ಯಕ್ಷ ನರಸಿಂಗರಾವ್ ದೇಶಪಾಂಡೆ ತಿಳಿಸಿದರು.
ಅವರು ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 8ವರ್ಷಗಳಿಂದ ಮಹಾಸಭಾದಿಂದ ಬ್ರಾಹ್ಮಣ ಸಮಾಜ ಹಾಗೂ ಇನ್ನಿತರೆ ಸಮಾಜಗಳ ಪ್ರತಿಭಾವಂತರನ್ನು ಸನ್ಮಾನಿಸುವ ಪರಿಪಾಠವಿದ್ದು, ಅದರಂಗವಾಗಿ ಆ.18ರಂದು ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.
ಅಂದು ನಗರದ ರಂಗಮಂದಿರದಲ್ಲಿ ಸಂಜೆ 4.30ಕ್ಕೆ ನಡೆಯುವ ಸಮಾರಂಭದ ಸಾನ್ನಿಧ್ಯವನ್ನು ಉಡುಪಿ ಫಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ವಹಿಸುವರು. ಮುಖ್ಯ ಅತಿಥಿಗಳಾಗಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ದಿವಾಕರ್ ಡೋಂಗ್ರೆ, ರಾಜ್ಯ ಪ್ರಧಾನ ಸಂಚಾಲಕ ಡಿ.ಎನ್. ಸುರೇಶ್, ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಮುಖ್ಯ ಭಾಷಣಕಾರರಾಗಿ ದಿ.ದ.ರಾ. ಬೇಂದ್ರೆ ಅವರ ನಿಕಟವರ್ತಿ ಸುರೇಶ್ ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆ. ಮಹಾಸಭಾದ ಸಭಾಪತಿ ಡಾ.ಆನಂದ ತೀರ್ಥ ಫಡ್ನೀಸ್, ಜಿಲ್ಲಾ ವಿಪ್ರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಶೇಷಗಿರಿರಾವ್ ಕುಲಕರ್ಣಿ, ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಜಗನ್ನಾಥ ಕುಲಕರ್ಣಿ, ಗಿರೀಶ್ ಕನಕವೀಡು ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ಪ್ರಶಸ್ತಿ ಪ್ರದಾನ: ಪ್ರಸಕ್ತ ವರ್ಷದ ವಿಪ್ರಶ್ರೀ ಪ್ರಶಸ್ತಿಯನ್ನು ಈ ಸಮಾರಂಭದಲ್ಲಿ ಪಂಡಿತ್ ಮುರಳೀಧರಾಚಾರ್ಯ ಗಲಗಲಿ ಅವರಿಗೆ ಪ್ರದಾನ ಮಾಡಲಾಗುತ್ತದೆ. ಅದೇ ವೇಳೆ ಸಿಂಧನೂರು ನಗರಸಭೆಯ ಸದಸ್ಯ ವೆಂಕಟರಾವ್(ರಾಜು ಬಂಡಿ ವಕೀಲರು), ಲಿಂಗಸ್ಗೂರು ಪುರಸಭೆ ಸದಸ್ಯರಾದ ಶಾಂತಾಬಾಯಿ ಕುಲಕರ್ಣಿ ಹಾಗೂ ಗುಂಡೂರಾವ್ ಕುಲಕರ್ಣಿ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ಈ ಪರೀಕ್ಷೆಗಳಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಯಾವುದೇ ಸಮಾಜಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತದೆ ಎಂದು ತಿಳಿಸಿದರು.
ಬೋಧಕರಿಗೆ ಸನ್ಮಾನ: ಅದೇ ರೀತಿ ಈ ಪರೀಕ್ಷೆಗಳಲ್ಲಿ ಯಾವುದೇ ವಿಷಯದಲ್ಲಿ ಶೇ.100ಕ್ಕೆ 100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಆಯಾ ವಿಷಯ ಬೋಧಕರನ್ನೂ ಸನ್ಮಾನಿಸಲು ನಿರ್ಧರಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಗಳಿಸಿದ ಯಾವುದೇ ಸಮಾಜಕ್ಕೆ ಸೇರಿದ ವಿದ್ಯಾರ್ಥಿಯನ್ನು ಸನ್ಮಾನಿಸಲಾಗುತ್ತದೆ ಎಂದರು. ಈಗಾಗಲೇ ಜಿಲ್ಲಾದ್ಯಂತದಿಂದ ಸುಮಾರು 80 ಅರ್ಜಿಗಳು ಪ್ರತಿಭಾವಂತ ವಿದ್ಯಾರ್ಥಿಗಳಿಂದ ಲಭ್ಯವಾಗಿದ್ದು, ಸನ್ಮಾನಕ್ಕೆ ಅರ್ಹರನ್ನು ಆಯ್ಕೆ ಸಮಿತಿಯು ಅಂತಿಮಗೊಳಿಸಲಿದೆ ಎಂದ ಅವರು, ಬಡ ಹಾಗೂ ಪ್ರತಿಭಾವಂತ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಮಹಾಸಭಾದಿಂದ ಮುಂದಿನ ದಿನಗಳಲ್ಲಿ ಆರ್ಥಿಕ ಸಹಾಯ ನೀಡುವ ಬಗ್ಗೆ ಈಗಾಗಲೇ ನಿರ್ಧರಿಸಲಾಗಿದೆ ಎಂದರು. ಮಹಾಸಭಾದ ಪ್ರಮುಖರಾದ ಡಾ.ಆನಂದತೀರ್ಥ ಫಡ್ನೀಸ್, ಗಿರೀಶ್ ಕನಕವೀಡು, ಪ್ರಾಣೇಶ್ ಮುತಾಲಿಕ್, ಸುಧೀಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement