ವಿಶ್ವಕರ್ಮ ಸಮಾಜ ಪದಾಧಿಕಾರಿಗಳು
ರಾಯಚೂರು: ಜಿಲ್ಲಾ ವಿಶ್ವಕರ್ಮ ಸಮಾಜದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಕರೆದಿದ್ದ ಸಮಾಜದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಜಿಲ್ಲಾ ಘಟಕಕ್ಕೆ ಗೌರವಾಧ್ಯಕ್ಷರಾಗಿ ಪ್ರಹ್ಲಾದಾಚಾರ್ ಗಾಣದಾಳ್, ಕಾರ್ಯಾಧ್ಯಕ್ಷರಾಗಿ ಶ್ರೀನಿವಾಸ ಬಡಿಗೇರ್ ಆತ್ಕೂರು, ಅಧ್ಯಕ್ಷರಾಗಿ ಬ್ರಹ್ಮಗಣೇಶ್ ವಕೀಲರು, ಪ್ರಧಾನ ಕಾರ್ಯದರ್ಶಿಯಾಗಿ ಮಾರುತಿ ಬಡಿಗೇರ್ ಆಯ್ಕೆಯಾಗಿದ್ದಾರೆ. ನಗರ ಘಟಕಕ್ಕೆ ಅಧ್ಯಕ್ಷರಾಗಿ ವೆಂಕಟೇಶ್ ಅನ್ವರಿ, ಉಪಾಧ್ಯಕ್ಷರಾಗಿ ಲಕ್ಷ್ಮೀಪತಿ ಯರಗೇರಾ, ಪ್ರಕಾಶ್, ಪ್ರಧಾನ ಕಾರ್ಯದರ್ಶಿಯಾಗಿ ರಾಮಾಚಾರಿ ಬಡಿಗೇರ್, ಜಂಟಿ ಕಾರ್ಯದರ್ಶಿಯಾಗಿ ಮೋಹನ್ ಲಿಂಗಪ್ಪ ಪತ್ತಾರ್ ಆಯ್ಕೆಯಾಗಿದ್ದಾರೆಂದು ಸಮಾಜದ ಪ್ರಕಟಣೆ ತಿಳಿಸಿದೆ.
ಪದಾಧಿಕಾರಿಗಳ ಆಯ್ಕೆ: ಹಾಗೆಯೇ ನಗರದ ಮಹಿಳಾ ಘಟಕಕ್ಕೆ ಅಧ್ಯಕ್ಷೆಯಾಗಿ ಪುಷ್ಪಾ ಅನ್ವರಿ, ಉಪಾಧ್ಯಕ್ಷರಾಗಿ ಸೀತಾ ವೀರಭದ್ರಪ್ಪ ಕಂಬಾರ್, ಮಮತಾ ಈಶ್ವರ್, ಪ್ರಧಾನ ಕಾರ್ಯದರ್ಶಿಯಾಗಿ ಸುಮಂಗಲಾ ನಂಜರಗಿ, ಸುಧಾಮನೋಹರ್ ಬಡಿಗೇರ್, ಡಾ. ಸವಿತಾ ಪಂಪಾಪತಿ ಬಡಿಗೇರ್ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ರಾಯಚೂರು ಗ್ರಾಮಾಂತರ ಘಟಕಕ್ಕೆ ಅಧ್ಯಕ್ಷರಾಗಿ ಮನೋಹರ ಗುಂಜಳ್ಳಿ, ಉಪಾಧ್ಯಕ್ಷರಾಗಿ ಜಗನ್ನಾಥ ಪತ್ತಾರ್, ನರಸಿಂಹಾಚಾರಿ ಚಂದ್ರಬಂಡಾ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಹ್ಲಾದಾಚಾರಿ ಗಾಣದಾಳ್ ಆಯ್ಕೆಯಾಗಿದ್ದಾರೆಂದು ಸಂಘ ತಿಳಿಸಿದೆ. ರಾಯಚೂರು ನಗರ ಯುವ ಘಟಕಕ್ಕೆ ಅಧ್ಯಕ್ಷರಾಗಿ ಪ್ರಹ್ಲಾದ್ ಆಚಾರಿ, ಉಪಾಧ್ಯಕ್ಷರಾಗಿ ನಾಗರಾಜ್ ಪತ್ತಾರ್, ಬಂಗಾರ ರಾಜು, ಪ್ರಧಾನ ಕಾರ್ಯದರ್ಶಿಯಾಗಿ ಜೆ.ರಾಘವೇಂದ್ರ ಆಯ್ಕೆಯಾಗಿದ್ದಾರೆ. ರಾಯಚೂರು ಗ್ರಾಮಾಂತರ ಯುವ ಘಟಕಕ್ಕೆ ಅಧ್ಯಕ್ಷರಾಗಿ ರಾಮುಲು ಯಾಪಲದಿನ್ನಿ, ಉಪಾಧ್ಯಕ್ಷರಾಗಿ ಸುರೇಶ್ ಸಗಮಕುಂಟಾ, ವೀರಬ್ರಹ್ಮಯ್ಯಾಚಾರಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸಾಚಾರಿ ಆಯ್ಕೆಯಾಗಿದ್ದಾರೆಂದು ಸಮಾಜದ ಪ್ರಕಟಣೆ ತಿಳಿಸಿದೆ.
ವಿಶೇಷ ಉಪನ್ಯಾಸ ಕಾರ್ಯಕ್ರಮ ಯಶಸ್ವಿ
ರಾಯಚೂರು: ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹರವಿ ಬಸವಣ್ಣ ಕ್ಯಾಂಪಿನಲ್ಲಿ ಇತ್ತೀಚೆಗೆ ಮಣ್ಣು ಪರೀಕ್ಷೆಯ ಮಹತ್ವ ಮತ್ತು ಬತ್ತದಲ್ಲಿ ಪೋಷಕಾಂಶಗಳ ನಿರ್ವಹಣೆ ಕುರಿತು ಉಪನ್ಯಾಸ ಆಯೋಜಿಸಲಾಗಿತ್ತು. ಪ್ರಗತಿ ಪರ ರೈತ ವೆಂಕಟರೆಡ್ಡಿ ಮತ್ತು ಮಲ್ಲಿಕಾರ್ಜುನ ನಾಯ್ಕರ ಅವರ ಕೂರಿಗೆ ಭತ್ತದ ಯಂತ್ರದಲ್ಲಿ ಮಣ್ಣಿನ ಮಾದರಿಯ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಶಾಸ್ತ್ರಜ್ಞ ಡಾ. ಎಸ್.ಎನ್. ಭಟ್ ರೈತರನ್ನು ಉದ್ದೇಶಿಸಿ ಮಾತನಾಡಿ, ಬತ್ತದಲ್ಲಿ ರೈತರು ಅಧಿಕ ರಸಗೊಬ್ಬರ ಬಳಸುತ್ತಿದ್ದು, ಭೂ ಗುಣಧರ್ಮಗಳು ಹಾಳಾಗುತ್ತವೆ. ಅಧಿಕ ಉತ್ಪಾದನಾ ವೆಚ್ಚ ಭರಿಸಬೇಕಾಗುತ್ತದೆ. ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರ, ಗದ್ದೆಯಲ್ಲಿ ಡೆಂಚಾ ಹಸಿರೆಲೆ ಗೊಬ್ಬರ ಬಳಸುವಂತೆ ಸಲಹೆ ನೀಡಿದರು.
ವಿಜ್ಞಾನ ವಸ್ತು ಪ್ರದರ್ಶನ; ಸಂಗೀತಾ ರಾಜ್ಯ ಮಟ್ಟಕ್ಕೆ
ಲಿಂಗಸ್ಗೂರು: ತಾಲೂಕಿನ ಹೂವಿನಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುಮಾರಿ ಸಂಗೀತಾ ಸಿದ್ಧಲಿಂಗಪ್ಪ ಎಂಬ ವಿದ್ಯಾರ್ಥಿನಿ ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ರಾಯಚೂರಿನ ಡಯಟ್ ಯರಮರಸ್ನಲ್ಲಿ ಜು. 27ರಿಂದ ಆ.1ರ ವರೆಗೆ ನಡೆದ 2012- 13ನೇ ಸಾಲಿನ ಪ್ರಾಥಮಿಕ ಶಾಲೆಗಳ ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ್, ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಕುಮಾರಿ ಸಂಗೀತಾ ಭರತ ಶಕ್ತಿಯಿಂದ ವಿದ್ಯುಚ್ಛಕ್ತಿ ಉತ್ಪಾದಿಸುವ ಮಾದರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಇದಕ್ಕೆ ವಿಜ್ಞಾನ ಶಿಕ್ಷಕ ಚಂದ್ರಶೇಖರ ಪಾಟೀಲ್ ಅವರ ಮಾರ್ಗದರ್ಶ ನೀಡಿದ್ದಾರೆ. ಇವರ ಈ ಸಾಧನೆಗೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಮುಖ್ಯಗುರುಗಳು ಹಾಗೂ ಸಿಬ್ಬಂದಿ ವರ್ಗ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆಯಲೆಂದು ಶುಭ ಹಾರೈಸಿದ್ದಾರೆ.
ಡಾ. ತಿಮ್ಮಪ್ಪ ವಡ್ಡೆಪಲ್ಲಿ ಅವರಿಗೆ ಯೋಗರತ್ನ ಪ್ರಶಸ್ತಿ ಪ್ರದಾನ
ರಾಯಚೂರು: ಬಿಎನ್ಡಬ್ಲ್ಯೂ ಪತಂಜಲಿ ಯೋಗ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಡಾ. ತಿಮ್ಮಪ್ಪ ವಡ್ಡೆಪಲ್ಲಿ ಅವರಿಗೆ ಯೋಗರತ್ನ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ರಾಜ್ಯ ಯೋಗ ಸಂಘ ಹಾಗೂ ದಕ್ಷಿಣ ಭಾರತದ ಯೋಗ ಸಂಘದಿಂದ ಆಯೋಜಿಸಿದ್ದ 11ನೇ ಯೋಗಾ ಚಾಂಪಿಯನ್ಶಿಪ್ ಸ್ಪರ್ಧೆಯ ವೇಳೆ ಡಾ. ತಿಮ್ಮಪ್ಪ ಅವರಿಗೆ ಯೋಗರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಕಚೇರಿ ಉದ್ಘಾಟನೆ
ರಾಯಚೂರು: ನಗರದಲ್ಲಿ ಈಚೆಗೆ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯ ಕಚೇರಿಯನ್ನು ಸಂಘಟನೆಯ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಉದ್ಘಾಟಿಸಿ, ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಸಂಘಟನೆಯ ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ತಾಯಣ್ಣ ಹೊಸೂರು ವಹಿಸಿದ್ದರು. ಉಪಾಧ್ಯಕ್ಷ ಚಂದ್ರಶೇಖರ್ ಯಕ್ಲಾಸಪೂರು, ಜನಾರ್ಧನ ಹಳ್ಳಿಬೆಂಚಿ, ಎನ್.ಕೆ. ನಾಗರಾಜ, ವೆಂಕಟೇಶ್, ಮಹೇಶ್, ಮೌಲಾ, ರಾಜಶೇಖರ್ ಸೇರಿ ಅನೇಕರಿದ್ದರು.
19ರಂದು ಜಿಲ್ಲಾ ಸಮ್ಮೇಳನ
ರಾಯಚೂರು: ರಾಜ್ಯ ಗ್ರಾಪಂ ನೌಕರರ ಸಂಘದ ಜಿಲ್ಲಾ ಸಮ್ಮೇಳನವನ್ನು ಆ.19ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು ಸಂಘ ತಿಳಿಸಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಸಂಘದ ಮಾಜಿ ಅಧ್ಯಕ್ಷ ನಾರಾಯಣ, ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆ.19ರಂದು ಬೆಳಗ್ಗೆ 10ಕ್ಕೆ ಸಮ್ಮೇಳನವನ್ನು ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ನೆರವೇರಿಸಲಿದ್ದಾರೆ. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಾಡಗೌಡ, ಖಜಾಂಚಿ ಆರ್.ಎಸ್. ಬಸವರಾಜ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ. ಈ ಸಮ್ಮೇಳನದಲ್ಲಿ ಜಿಲ್ಲೆಯ ಎಲ್ಲ ಗ್ರಾಪಂ ನೌಕರರು ಪಾಲ್ಗೊಂಡು ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.
ಮುಖ್ಯ ಅಡುಗೆದಾರ ನೇಮಕ ಆದೇಶ ರದ್ದತಿಗೆ ಆಗ್ರಹ
ಲಿಂಗಸ್ಗೂರು: ತಾಲೂಕಿನ ಈಚನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಮುಖ್ಯ ಅಡುಗೆದಾರಳ ನೇಮಕಾತಿ ಆದೇಶ ರದ್ದುಪಡಿಸುವಂತೆ ಆಗ್ರಹಿಸಿ ಮಹರ್ಷಿ ವಾಲ್ಮೀಕಿ ನಾಯಕ ಯುವಕ ಸಂಘ ಈಚನಾಳ ಘಟಕದಿಂದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಉನ್ನತಿಕರಿಸಿದ ಈಚನಾಳ ಗ್ರಾಮದ ಸರಕಾರಿ ಶಾಲೆಯಲ್ಲಿ ಬಿಸಿಯೂಟ ಮುಖ್ಯ ಅಡುಗೆಯವರ ಖಾಲಿಯಿರುವ ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಅದರಂತೆ ಪರಿಶಿಷ್ಟ ಜಾತಿಯ ಶ್ರೀದೇವಿ ದೇವಪ್ಪ ಇವರು ಅರ್ಜಿ ಸಲ್ಲಿಸಿದ್ದರು. ಆದರೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದ ನಿಯಮ ಪಾಲಿಸದೆ ಸದರಿ ಅರ್ಜಿದಾರಳನ್ನು ಸಂದರ್ಶನಕ್ಕೆ ಕರೆಯದೆ ಏಕಪಕ್ಷೀಯವಾಗಿ ಸಾಮಾನ್ಯ ಮಹಿಳೆ ಸರೋಜ ಚನ್ನಾರೆಡ್ಡಿ ಎಂಬುವರನ್ನು ಕಾನೂನುಬಾಹಿರವಾಗಿ ನೇಮಕಾತಿ ಆದೇಶ ಹೊರಡಿಸಿರುವುದು ಸಂಘದ ಗಮನಕ್ಕೆ ಬಂದಿರುತ್ತದೆ. ಈ ಕುರಿತು ಕೂಡಲೆ ಪರಿಶೀಲನೆ ನಡೆಸಿ ಅಕ್ರಮ ನೇಮಕಾತಿ ಆದೇಶವನ್ನು ರದ್ದುಪಡಿಸಿ ಪರಿಶಿಷ್ಟ ಪಂಗಡದ ಮಹಿಳೆ ಶ್ರೀದೇವಿ ಎಂಬುವರಿಗೆ ನೇಮಕ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಶಾಲೆಗೆ ಹಾಗೂ ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸ್ವಾತಂತ್ರ್ಯೋತ್ಸವ ಆಚರಣೆ
ದೇವದುರ್ಗ: ತಾಲೂಕಿನ ನಾಗಡದಿನ್ನಿ ಗ್ರಾ.ಪಂ. ಕಾರ್ಯಾಲಯ ಮತ್ತು ಸಾಕ್ಷರತಾ ಲೋಕ ಶಿಕ್ಷಣ ಕೇಂದ್ರದಲ್ಲಿ ರಾಷ್ಟ್ರ ಧ್ವಜಾರೋಹಣ ಮತ್ತು ಸಾಕ್ಷರತಾ ಧ್ವಜಾರೋಹಣವನ್ನು ಗುರುವಾರ ಗ್ರಾಪಂ ಅಧ್ಯಕ್ಷೆ ಬೂದೆಮ್ಮ ಹೆಗ್ಗಡದಿನ್ನಿ ನೆರವೇರಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ನಬೀಸಾಬ್, ಬಾಲಕರ ವಸತಿ ನಿಲಯದಲ್ಲಿ ಮೇಲ್ವಿಚಾರಕ ವೀರೇಶ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಸದಸ್ಯರು, ಪಿಡಿಒ ಅನೇಕರಿದ್ದರು.
19ರಂದು ಶಾಲೆಗೆ ಬೀಗ: ಪ್ರತಿಭಟನೆ
ದೇವದುರ್ಗ: ತಾಲೂಕಿನ ಮುಂಡರಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗೆ ಕೂಡಲೇ ನೇಮಕ ಮಾಡುವಂತೆ ಆಗ್ರಹಿಸಿ ಎಸ್ಡಿಎಂಸಿ ಹಾಗೂ ಗ್ರಾಮಸ್ಥರಿಂದ ಆ. 19ರಂದು ಶಾಲೆಗೆ ಬೀಗ ಹಾಕಿ ಪ್ರತಿಭಟಿಸಲಾಗುತ್ತದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಗುರುಬಸ್ಸಯ್ಯ ಸ್ವಾಮಿ ತಿಳಿಸಿದ್ದಾರೆ. ಈ ಕುರಿತು ಬಿಇಒ ಅವರಿಗೆ ದೂರು ಸಲ್ಲಿಸಿರುವ ಅವರು, ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 375 ಮಕ್ಕಳಿದ್ದು, ಶಾಲೆಯಲ್ಲಿ ಒಟ್ಟು 12 ಶಿಕ್ಷಕರ ಹುದ್ದೆಗಳಿವೆ. ಕೇವಲ 5 ಜನ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದ ಮಕ್ಕಳ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲಲ ಎಂದು ಆರೋಪಿಸಿದ್ದಾರೆ. ಶಾಲೆಯಲ್ಲಿ ಸಮರ್ಪಕ ಕೊಠಡಿಗಳಿಲ್ಲ. ಮಕ್ಕಳಿಗೆ ಕುಡಿಯುವ ನೀರು, ಶೌಚಾಲಯವಿಲ್ಲ. ಇಂಥ ಪರಿಸ್ಥಿತಿಯಿಂದ ಬೇಸತ್ತ ಪಾಲಕರನೇಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸಿದ್ದಾರೆ. ಬಡವರ ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುವಂತಾಗಿದೆ ಎಂದು ದೂರಿದ್ದಾರೆ. ಕೂಡಲೇ ಶಾಲೆಗೆ ಶಿಕ್ಷಕರನ್ನು ನೇಮಿಸಬೇಕು.ತಪ್ಪಿದಲ್ಲಿ ಆ.19ರಂದು ಶಾಲೆಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.
ಇಂದಿರಾ ಆವಾಸ್; ಸೂಚನೆ
ರಾಯಚೂರು: ತಾಲೂಕಿನ ವ್ಯಾಪ್ತಿಯ ಗ್ರಾಪಂಗಳಿಗೆ ಪ್ರಸಕ್ತ ಸಾಲಿಗೆ ಬಸವ ವಸತಿ ಹಾಗೂ ಇಂದಿರಾ ಆವಾಸ್ ಯೋಜನೆಯಡಿ ವಸತಿ ನಿಗಮದಿಂದ ನಿಗದಿಯಾದ ಮನೆಗಳ ಗುರಿ ಹಾಗೂ ಮಾರ್ಗಸೂಚಿಗಳನ್ನು ಎಲ್ಲ ಪಿಡಿಒಗಳಿಗೆ ರವಾನಿಸಿ, ವಸತಿ ನಿಗಮದ ಮಾರ್ಗಸೂಚಿಗಳಂತೆ ನಿಯಮಾನುಸಾರ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ಪಡೆಯಲು ಸೂಚಿಸಲಾಗಿದೆ. 2013- 14ನೇ ಸಾಲಿಗೆ ಇಂದಿರಾ ಆವಾಸ್ ಯೋಜನೆಯ ಫಲಾನುಭವಿಗಳನ್ನು ಆ. 30ರೊಳಗೆ ಆಯ್ಕೆ ಮಾಡಿ ಆಯ್ಕೆಯಾದ ಫಲಾನುಭವಿಗಳ ಖಾಲಿ ನಿವೇಶನದ ಜಿಪಿಎಸ್ ಛಾಯಾಚಿತ್ರವನ್ನು ಅಳವಡಿಸಿ ಸೆ. 15ರೊಳಗೆ ನಿಗಮದಿಂದ ಅನುಮೋದನೆ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ತಾಪಂ ಕಚೇರಿ ಸಂಪರ್ಕಿಸಲು ಸೂಚಿಸಲಾಗಿದೆ.
ಅಪರಿಚಿತ ಶವ ಪತ್ತೆ
ರಾಯಚೂರು: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂದಿನ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತನು 40ರಿಂದ 45 ವರ್ಷ ವಯಸ್ಸಿನವನಿದ್ದು, ಈತನ ಮೃತ ದೇಹವು ಕಾಲೇಜಿನ ಮುಂದಿನ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.