ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹದಗೆಟ್ಟ ರಸ್ತೆಯಲ್ಲಿ ಸಸಿ ನೆಟ್ಟು ಪ್ರತಿಭಟನೆ

Vishwanath S
Updated On : 17 Aug 2013, 11:12 am

ಕನ್ನಡಪ್ರಭ ವಾರ್ತೆ ,  ರಾಯಚೂರು ,  ಆ.16
ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ ಕಾರ್ಯಕರ್ತರು ಶುಕ್ರವಾರ ರಸ್ತೆಗಳಲ್ಲಿನ ತಗ್ಗುಗಳಲ್ಲಿಯೇ ಸಸಿ ನೆಟ್ಟು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನಗರದ ವಿವೇಕಾನಂದ ವೃತ್ತದಿಂದ ಹದಗೆಟ್ಟಿರು ರಸ್ತೆಯಲ್ಲಿ ಸಸಿ ನೆಟ್ಟು ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡ ಡಾ. ಚಂದ್ರಗಿರೀಶ್, ನಗರದಲ್ಲಿನ ರಸ್ತೆಗಳು ತೀರಾ ಹದಗೆಟ್ಟಿವೆ. ಜನತೆ ಪ್ರಯಾಸಪಡುತ್ತಲೇ ರಸ್ತೆಯಲ್ಲಿ ಸಂಚರಿಸುವಂತಾಗಿದೆ ಎಂದು ಆರೋಪಿಸಿದರು.
ಜನರ ತಾಳ್ಮೆ ಪರೀಕ್ಷೆ: ನಗರದಲ್ಲಿ ಗುಣಮಟ್ಟದ ರಸ್ತೆ, ಮೂಲಸೌಲಭ್ಯಗಳಿಗೆ ಆಗ್ರಹಿಸಿ ಕಳೆದ ಅನೇಕ ತಿಂಗಳಿಂದ ಸಮಿತಿಯಿಂದ ನಿರಂತರ ಹೋರಾಟ ನಡೆಸಲಾಗಿದೆ. ಆದರೆ ಆಡಳಿತ ಮಾತ್ರ ಎಚ್ಚೆತ್ತಿಲ್ಲ. ನಗರಸಭೆಯು ಜನತೆಯ ತಾಳ್ಮೆ ಪರೀಕ್ಷಿಸುವ ಕಾರ್ಯ ಮಾಡುತ್ತಿದೆ ಎಂದು ದೂರಿದರು.
ಕೆಲವೇ ಕೆಲ ದಿನಗಳ ಹಿಂದೆ ನಗರದ ಪ್ರಮುಖ ರಸ್ತೆಗಳ ಡಾಂಬರೀಕರಣ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ ಈಗಾಗಲೇ ರಸ್ತೆಗಳಲ್ಲಿ ತಗ್ಗು ಉಂಟಾಗಿವೆ. ಇದು ಕಳಪೆ ಕಾಮಗಾರಿಯನ್ನು ಸ್ಪಷ್ಟಪಡಿಸಿದೆ. ಸಾರ್ವಜನಿಕರಿಗೆ ಸೇರಿದ ಕೋಟ್ಯಂತರ ರು. ಪೋಲಾಗುತ್ತಿದೆ. ಗುತ್ತಿಗೆದಾರರ ಪಾಲಾಗುತ್ತಿದೆ ಎಂದು ಟೀಕಿಸಿದರು.
ರಸ್ತೆಗಳಲ್ಲಿ ಭಾರೀ ತಗ್ಗು: ನಗರದ ವಿವೇಕಾನಂದ ವೃತ್ತದಿಂದ ನೇತಾಜಿ ಪೊಲೀಸ್ ಠಾಣೆ, ಚತುಷ್ಪಥ ರಸ್ತೆ ಸೇರಿ ಬಹುತೇಕ ರಸ್ತೆಗಳಲ್ಲಿ ಭಾರೀ ಆಳದ ತಗ್ಗುಗಳಾಗಿದ್ದು, ಇದರಿಂದಾಗಿ ಅನೇಕರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾರೆ. ಆದರೂ ಜನತೆ ಆಡಳಿತದ ವಿರೋಧಿ ಹೋರಾಟದ ಮನೋಭಾವ ಪ್ರದರ್ಶಿಸುತ್ತಿಲ್ಲ. ಅದರಿಂದಾಗಿ ಆಡಳಿತ ಎಲ್ಲ ವಿಚಾರಗಳಿಗೆ ಅಸಡ್ಡೆ ತೋರುತ್ತಿದೆ ಎಂದು ಆರೋಪಿಸಿದರು.
ನಗರದ ಜನತೆ ನಗರಸಭೆಯ ಆಡಳಿತದ ನಿರ್ಲಕ್ಷ್ಯ ಖಂಡಿಸಿ ಹೋರಾಟಕ್ಕೆ ಮುಂದಾಗಬೇಕು. ರಸ್ತೆಗಳ ದುರಸ್ತಿ ನೆಪದಲ್ಲಿ ಈಗಾಗಲೇ ಸಾಕಷ್ಟು ಅನುದಾನ ದುರ್ಬಳಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಳಪೆ ರಸ್ತೆ ನಿರ್ಮಿಸಲು ಪುನಾ ಅನುದಾನದ ಎತ್ತುವಳಿಗೆ ಅವಕಾಶ ನೀಡದಂತೆ ಜಿಲ್ಲಾಧಿಕಾರಿಗಳು ನಿಗಾ ವಹಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹೆಬೂಬ್ ಪಾಷಾ ಮೂಲಿಮನಿ, ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹಾವೀರ್, ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ವೀರೇಶ್, ಎಐಡಿವೈಒ ಜಿಲ್ಲಾಧ್ಯಕ್ಷ ಶರಣಪ್ಪ ಉದ್ಬಾಳ್, ಕಾರ್ಯದರ್ಶಿ ಚನ್ನಬಸವ ಜಾನೇಕಲ್, ರಾಮಣ್ಣ, ಮಹೇಶ್ ಚೀಕಲಪರ್ವಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement