ಶುದ್ಧ ಕಾಯಕದಿಂದ ಸಾರ್ಥಕ ಜೀವನ ಸಾಧ್ಯ
ಕನ್ನಡಪ್ರಭ ವಾರ್ತೆ ಸಿಂಧನೂರು, ಆ.17
ವಚನಕಾರರು ಕಂಡುಕೊಂಡ ಜೀವನ ವಿಧಾನವನ್ನು ನಾವೆಲ್ಲ ಅನುಸರಿಸಬೇಕು. ಮಾಡುವ ಪ್ರತಿಯೊಂದು ಕಾರ್ಯದಲ್ಲಿ ಪರಿಶ್ರಮ, ಪ್ರಾಮಾಣಿಕತೆ, ಸತ್ಯ, ನ್ಯಾಯ, ಆಸಕ್ತಿ ಇದ್ದಾಗ ಮಾತ್ರ ಉದಾತ್ತ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಸಿರುಗುಪ್ಪಾ ಅಕ್ಕನ ಬಳಗದ ಎನ್.ಸುಮಂಗಲ ಡಾ. ಶಿವಪ್ರಕಾಶ ಅಭಿಪ್ರಾಯಪಟ್ಟರು.
ಭವಿಷ್ಯ ಉಜ್ವಲ: ಅವರು ನಗರದ ಬಸವಕೇಂದ್ರದ ಗೌರವ ಸಲಹೆಗಾರ ಪಿ. ವೀರಭದ್ರಪ್ಪ ಕುರುಕುಂದಿ ಇವರ ನಿವಾಸದಲ್ಲಿ ಬಸವಕೇಂದ್ರ, ಯುವ ಬಸವಕೇಂದ್ರ, ಮಹಿಳಾ ಬಸವಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡಿದ್ದ ಮನೆಮನೆಯಲ್ಲಿ ವಚನ ಜ್ಯೋತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆತ್ಮಸಾಕ್ಷಿಯಿಂದ ಯಾರು ಸತ್ಯವನ್ನು ನುಡಿಯುವರೋ ನಿಜವಾದ ಶರಣರಾಗಲು ಸಾಧ್ಯವಾಗುತ್ತದೆ. ಸತ್ಯವೇ ಜೀವನ ಆಗಬೇಕು. ಸತ್ಯ ನುಡಿಯುವವರಿಗೆ ಕಷ್ಟ ಕಾರ್ಪಣ್ಯಗಳು ದೂರಹೋಗುತ್ತವೆ. ಯುವಕ, ಯುವತಿಯರು ಯಾವುದೇ ಕೆಟ್ಟ ಹಾದಿಗೆ ಹೋಗದೆ ಶರಣರ ಸನ್ಮಾರ್ಗದಲ್ಲಿ ನಡೆದು ವಚನಗಳಲ್ಲಿನ ಆದರ್ಶಗಳನ್ನು ಮನಗೂಡಿಸಿಕೊಂಡರೆ ಭವಿಷ್ಯ ಉಜ್ವಲವಾಗಲು ನೆರವಾಗುತ್ತದೆ ಎಂದರು.
ಗುಣಮಟ್ಟದ ಶಿಕ್ಷಣ: ಸುಮಂಗಲ ಶಿವುಕುಮಾರ ಬಳಿಗಾರ ಪ್ರಾಸ್ತಾವಿಕ ಮಾತನಾಡಿ, ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು, ಇದಕ್ಕೆ ಮೂಲ ಕಾರಣ ನಮ್ಮಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ. ಪ್ರತಿಯೊಬ್ಬರು ಶಿಕ್ಷಣದಿಂದ ಸತ್ಯ ಶುದ್ಧ ಕಾಯಕ ಅಳವಡಿಸಿಕೊಂಡಾಗ ಮಾತ್ರ ಮಾನವೀಯ ಮೌಲ್ಯಗಳು ಉಳಿಸಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಸಿರುಗುಪ್ಪದ ಬಸವಭೂಷಣ ಶರಣರು ಮಾತನಾಡಿ ಮನೆ ಮನೆಗೆ ವಚನ ಜ್ಯೋತಿ ಯಶಸ್ವಿಯಾಗಿ ಜರುಗಲೆಂದು ಶುಭ ಹಾರೈಸಿದರು.
ಸಾಹಿತಿ ಸಿದ್ದು ಯಾಪಲಪರ್ವಿ, ಸಿದ್ರಾಮಪ್ಪ ಮಾಡಶಿರವಾರ, ಶಾಮಣ್ಣ ನಾಯಕ, ಗುಂಡಪ್ಪ ಬಳಿಗಾರ, ಶಿವಣ್ಣ ಸಣ್ಣಪ್ಪನವರ್, ಎಸ್. ವೀರೇಶಪ್ಪ, ಶಾಂತಪ್ಪ ಚಿಂಚರಿಕಿ, ಕರೇಗೌಡ ಕುರುಕುಂದಿ, ವೀರಭದ್ರಗೌಡ ಅಮರಾಪುರ, ಅಮರೇಶ ಗುರಿಕಾರ, ಶರಣೇಗೌಡ ಚಿಂತಮಾನದೊಡ್ಡಿ, ಚಂದ್ರಶೇಖರ್ ಯರದಿಹಾಳ, ಡಾ.ಶಂಭನಗೌಡ, ನಿಜಗುಣ ಹಡಪಾದ್, ಆದಪ್ಪ ಚಿನ್ನಿ, ನಾಗಭೂಷಣ ನವಲಿ, ಪಂಪಣ್ಣ ಹಳ್ಳಿ, ಡಿ.ಎಚ್.ಕಂಬಳಿ, ನಾರಾಯಣ ಬೆಳಗುರ್ಕಿ, ಬಸವರಾಜ ಬಾದರ್ಲಿ, ಶರಣಪ್ಪ ಹಡಪದ, ಶರಣಪ್ಪ ಮೆದಕಿನಾಳ ಮತ್ತಿತರರಿದ್ದರು.