ಸಂಕ್ಷಿಪ್ತ ಸುದ್ದಿ
ಇಂದು ಶ್ರದ್ಧಾಂಜಲಿ ಕಾರ್ಯಕ್ರಮ
ರಾಯಚೂರು: ನಗರದ ಮಲ್ಲನ್ ನಾರಾಯಣ ಕಲ್ಯಾಣ ಮಂಟಪದಲ್ಲಿ ಆ.18ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ದಿ. ಅಯ್ಯಪ್ಪ ಅರೋಲಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 12.30ಕ್ಕೆ ನಡೆಯುವ ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಡಾ. ಎಸ್.ಸಿ. ಮಹಾದೇವಪ್ಪ, ಸಂಘಟನೆಯ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ್, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಡಾ. ದಸ್ತಗೀರಸಾಬ್ ದಿನ್ನಿ, ಶೋಭಾ ಕಟ್ಟಿಮನಿ, ಮಲ್ಲೇಶ್ ಸಜ್ಜನ್, ಅರ್ಜುನ್ ಭದ್ರೆ, ಬಸವರಾಜ ಮುಧೋಳ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಸಂಘಟನೆಯ ಪ್ರಮುಖರಾದ ಶರಣಪ್ಪ ದಿನ್ನಿ, ಚನ್ನಬಸವ ಯಕ್ಲಾಸಪುರ ಮನವಿ ಮಾಡಿದ್ದಾರೆ.
20-21ರಂದು ರಾಜ್ಯ ಸಮ್ಮೇಳನ
ರಾಯಚೂರು: ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ ಲೆನಿನ್ ವಾದಿ)ರೆಡ್ ಫ್ಲ್ಯಾಗ್ ಸಂಘಟನೆಯ 8ನೇ ಅಖಿಲ ಭಾರತ ಸಮ್ಮೇಳನದ ಹಿನ್ನೆಲೆಯಲ್ಲಿ ನಗರದಲ್ಲಿ ಆ.20 ಮತ್ತು 21ರಂದು ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ. ನಗರದ ಅಂಬೇಡ್ಕರ್ ಭವನದಲ್ಲಿ ಅಂದು ಮಧ್ಯಾಹ್ನ 2.30ಕ್ಕೆ ನಡೆಯುವ ಸಮ್ಮೇಳನವನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಜಯಕುಮಾರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಯ್ಯಪ್ಪ ಹೂಗಾರ್ ವಹಿಸಲಿದ್ದಾರೆ. ಕೇಂದ್ರ ಸಮಿತಿಯ ಸದಸ್ಯ ಫ್ರಡಿ ಕೆ.ಟಿ., ಜಿಲ್ಲಾಧ್ಯಕ್ಷ ಜಿ.ಎಸ್. ಕಡೆಮನಿ, ರಾಜ್ಯ ಸಮಿತಿ ಸದಸ್ಯ ಬಸವಲಿಂಗಪ್ಪ, ಜಿಲ್ಲಾ ಕಾರ್ಯದರ್ಶಿ ರವಿ ಕಡೆಮನಿ ಪಾಲ್ಗೊಳ್ಳಲಿದ್ದಾರೆ. ಸಂಘಟನೆ ಪ್ರಮುಖರಾದ ಚಾರ್ಲ್ಸ್ ಜಾರ್ಜ್, ವೆಂಕಟರೆಡ್ಡಜಿ, ಮಲ್ಲೆಪಲ್ಲೆ ಪ್ರಭಾಕರ್ ಭಾಗವಹಿಸಲಿದ್ದಾರೆಂದು ಸಂಘಟನೆ ತಿಳಿಸಿದ್ದು, ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದೆ.
ವ್ಯಕ್ತಿ ಆತ್ಮಹತ್ಯೆ
ರಾಯಚೂರು: ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಮದ್ಯ ವ್ಯಸನಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ರಸೂಲ್ ಸಾಬ್(40) ಎಂದು ಗುರುತಿಸಲಾಗಿದೆ. ಈತ ವಿಪರೀತ ಮದ್ಯ ಸೇವಿಸುವ ಚಟದವನಾಗಿದ್ದು, ಮದ್ಯಸೇವನೆಗೆ ಹಣ ನೀಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಅದರಿಂದ ಬೇಸತ್ತಿದ್ದ ಖಾಜಾಬೀ ತಂದೆಯ ಮನೆಯಲ್ಲಿ ವಾಸವಾಗಿದ್ದಳು. ನೊಂದ ಆತ ತನ್ನ ಮನೆಯ ಶೆಡ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.