ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಒತ್ತಾಯ
ಲಿಂಗಸ್ಗೂರು: ತಾಲೂಕಿನ ಅಡವಿಬಾವಿ ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಸಾರಿಗೆ ಘಟಕ ವ್ಯವಸ್ಥಾಪಕ ಬಸವರಾಜ ಪಾಟೀಲರಿಗೆ ಶನಿವಾರ ಮನವಿ ಸಲ್ಲಿಸಿದರು.
ಕಾಚಾಪೂರ ಗ್ರಾಪಂ ವ್ಯಾಪ್ತಿಯ ಅಡವಿಬಾವಿ ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ಹಾಗೂ ಶಾಲಾ- ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮಕ್ಕಳು ಗ್ರಾಮದಿಂದ ಪ್ರತಿನಿತ್ಯ ಶಾಲಾ- ಕಾಲೇಜುಗಳಿಗೆ ಖೈರವಾಡಗಿ ಗ್ರಾಮದವರೆಗೆ ಕಾಲ್ನಡಿಗೆಯಿಂದ ತೆರಳಬೇಕಾಗಿದೆ. ಕೂಡಲೇ ಗ್ರಾಮಕ್ಕೆ ಸಾರಿಗೆ ಬಸ್ ಸೌಕರ್ಯ ಒದಗಿಸಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಗ್ರಾಪಂ ಸದಸ್ಯ ಗುರುಲಿಂಗನಗೌಡ, ಯಮನೂರಸಾಬ, ರಾಜಾಸಾಬ, ನೌಗನಗೌಡ, ಮಂಜುನಾಥ, ರಮಜಾನಸಾಬ, ವಿರುಪಣ್ಣ, ಶರಣಬಸವ ಸೇರಿದಂತೆ ಇನ್ನಿತರರು ಇದ್ದರು.