ಧರ್ಮ ಶ್ರದ್ಧೆ, ಗೌರವ ಭಾವನೆಯಿಂದ ಮಾತ್ರ ಸಾಧನೆ ಸಾಧ್ಯ
ಕ.ಪ್ರ.ವಾರ್ತೆ, ರಾಯಚೂರು, ಆ.18
ಧರ್ಮದೆಡೆಗೆ ಶ್ರದ್ಧೆ, ಸಂಪ್ರದಾಯ, ಸಂಸ್ಕೃತಿಯ ಮುಂದುವರಿಕೆಯಿಂದ ವಿದ್ಯಾರ್ಥಿ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯ. ಬ್ರಾಹ್ಮಣ ಸಮಾಜದವರು ತಮ್ಮನ್ನು ತಾವು ಬ್ರಾಹ್ಮಣರೆಂದು ಹೇಳಿಕೊಳ್ಳಲು ಹಿಂಜರಿಯಬೇಕಿಲ್ಲ ಎಂದು ಫಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಸಲಹೆ ನೀಡಿದರು.
ಅವರು ನಗರದ ರಂಗಮಂದಿರದಲ್ಲಿ ಭಾನುವಾರ ಸಂಜೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಆಯೋಜಿಸಿದ್ದ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಬ್ರಾಹ್ಮಣರು ಪರಂಪರಾಗತವಾಗಿ ವೈದಿಕ ವೃತ್ತಿ, ಸಂಸ್ಕೃತಿಯನ್ನು ಗೌರವಿಸುತ್ತಲೇ ಬಾಳಿ ಬದುಕಿದ್ದಾರೆ. ಆ ಮೂಲಕವೇ ಬದುಕಿನಲ್ಲಿ ಸಾಧನೆ ಮೆರೆದಿದ್ದಾರೆಂದು ಹೇಳಿದರು.
ಹಿಂಜರಿಕೆ ಸಲ್ಲದು: ಇಂದಿನ ಯುವಕರಲ್ಲಿ ಬ್ರಾಹ್ಮಣ ಎಂದು ಹೆಸರು ಹೇಳಿಕೊಳ್ಳಲು ಹಿಂಜರಿಕೆಯಿರುವುದು ಗಮನಕ್ಕೆ ಬಂದಿದೆ. ಅದು ಸರಿಯಲ್ಲ. ಜಾತಿಯಿಂದ ಬ್ರಾಹ್ಮಣನಾಗಿರುವುದು ಹಾಗೂ ಪಾಲಕರ, ಪೋಷಕರ ಉತ್ತಮ ಸಂಪ್ರದಾಯ, ಸಂಸ್ಕೃತಿಯಿಂದಾಗಿಯೇ ಸಾಧನೆ ಮಾಡಲು ಸಾಧ್ಯವಾಗಿದೆ ಎಂಬ ಸತ್ಯ ಅರಿಯಬೇಕಿದೆ ಎಂದರು. ಬ್ರಾಹ್ಮಣ ಸಮುದಾಯದಲ್ಲಿನ ಒಗ್ಗಟ್ಟಿನ ಕೊರತೆಯಿಂದಾಗಿಯೇ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ದೇಶಾದ್ಯಂತ ಎಲ್ಲ ರಾಜ್ಯಗಳಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಿದ್ದಾರೆ. ಆದರೆ ಎಲ್ಲರೂ ಇದುವರೆಗೆ ಒಗ್ಗೂಡುವ ನಿಟ್ಟಿನಲ್ಲಿ ಆಲೋಚಿಸದಿರುವುದು ವಿಷಾದನೀಯ ಎಂದು ಹೇಳಿದರು. ಬ್ರಾಹ್ಮಣ ಸಮಾಜದವರು ಕೇವಲ ಸ್ವಾರ್ಥಕ್ಕಾಗಿ ಪ್ರಾರ್ಥಿಸುವುದಿಲ್ಲ. ಸಮಾಜದ ಕಲ್ಯಾಣಕ್ಕಾಗಿ ನಿರಂತರ ಪ್ರಾರ್ಥಿಸುವ ವರಾಗಿದ್ದಾರೆ. ಜನಾಂಗವು ಅನ್ಯ ಜಾತಿ, ಧರ್ಮದವರಿಗೆ ಎಂದಿಗೂ ಅನ್ಯಾಯ ಮಾಡುವುದಿಲ್ಲ ಎಂಬುದು ಸಾಬೀತಾಗಿದೆ. ಬ್ರಾಹ್ಮಣರು ತಮ್ಮದೇ ಸಾಮರ್ಥ್ಯ, ಬುದ್ಧಿ ಶಕ್ತಿಯಿಂದ ಸಮಾಜದಲ್ಲಿ ನೆಲೆ ನಿಂತಿದ್ದಾರೆಂದರು.
ಸಾಧನೆ: ಸಮಾಜದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿರುವುದು ಸಂತಸದ ಸಂಗತಿ. ಬ್ರಾಹ್ಮಣ ಮಹಾಸಭಾದಿಂದ ಸಮಾಜದವರನ್ನು ಒಗ್ಗೂಡಿಸುವ ಕಾರ್ಯ ನಿರಂತರವಾಗಿ ಸಾಗಿದೆ. ಅದಕ್ಕೆ ಸಮಾಜದ ಎಲ್ಲರೂ ಮುಂದೆ ಬರಬೇಕಿದೆ. ಆ ಮೂಲಕ ಒಗ್ಗೂಡಿ ದೊಡ್ಡ ಶಕ್ತಿಯಾಗಿ ಬೆಳೆಯಬೇಕಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಂ.ಮುರಳೀಧರಾಚಾರ್ಯ ಗಲಗಲಿ ಅವರಿಗೆ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು ಅದೇ ರೀತಿ ರಾಜಕೀಯ ಕ್ಷೇತ್ರದಲ್ಲಿನ ಸಾಧನೆಗೆ ಜಿಲ್ಲೆಯ ಸಿಂಧನೂರಿನ ನಗರಸಭೆ ಸದಸ್ಯ ವೆಂಕಟರಾವ್, ಲಿಂಗಸ್ಗೂರು ಪುರಸಭೆಯ ಸದಸ್ಯರಾದ ಶಾಂತಾಬಾಯಿ ಕುಲಕರ್ಣಿ ಮತ್ತು ಗುಂಡುರಾವ್ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಹೆಚ್ಚು ಅಂಕಗಳಿಸಿದ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಾದ ನವ್ಯಶ್ರೀ, ಭಾರ್ಗವಿ, ಸಂದೀಪ್, ದಿವ್ಯಾ, ವೈಭವಿ, ಕಾರ್ತಿಕ್ ಅವರನ್ನು ಸನ್ಮಾನಿಸಲಾಯಿತು.