ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಸ್ ಸಿಬ್ಬಂದಿ ಕನ್ನಡಾಭಿಮಾನ ಬೆಳೆಸಲಿ

Rashmi Kasaragodu
Updated On : 19 Aug 2013, 12:01 pm

ಕ.ಪ್ರ. ವಾರ್ತೆ, ಗುಲ್ಬರ್ಗ, ಆ. 18
ಬಸ್ಸಿನ ಚಾಲಕ- ನಿರ್ವಾಹಕರು ನಡೆದಾಡುವ ವಾಚನಾಲಯವಿದ್ದಂತೆ. ಅವರು ಸಂಚರಿಸುವ ಸ್ಥಳಗಳಲ್ಲಿ ವಿವಿಧ ಸಂಸ್ಕೃತಿಯ ಜನತೆಯಲ್ಲಿ ಸಂವಹನ ಬೆಳೆಸಿ ಕನ್ನಡಾಭಿಮಾನ, ಸ್ವಾಭಿಮಾನ ಬೆಳೆಸುವ ಕೆಲಸ ಮಾಡಬೇಕು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಕರೆ ನೀಡಿದರು.
ಅವರು ನಗರದ ಕೋಠಾರಿ ಭವನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಆಯೋಜಿಸಿದ್ದ ರಾಜ್ಯ ಮಟ್ಟದ 8ನೇ ತ್ರೈವಾರ್ಷಿಕ ಮಹಾಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಸ್ಸಿನಂತೆ ಜೀವನ ಒಂದು ಪ್ರಯಣ. ಅದು ನಿಲ್ಲಬಾರದು. ಚಾಲಕ ಮತ್ತು ನಿರ್ವಾಹಕರು ಕರ್ನಾಟಕ ವಿವಿಧ ಸ್ಥಳಗಳಲ್ಲಿ ಕರ್ತವ್ಯದ ಮೇಲೆ ಸಂಚರಿಸುವ ಸಂದರ್ಭದಲ್ಲಿ ಅವರು ವಿವಿಧ ಸಂಸ್ಕೃತಿಯ ಜನತೆಗೆ ಭೇಟಿಯಾಗುತ್ತಾರೆ. ಆ ಭೇಟಿಯಾದ ಜನತೆಯಲ್ಲಿ ಕನ್ನಡ ಭಾಷಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಪ್ರಯಾಣಿಕ ಪ್ರಯತ್ನ ಮಾಡಬೇಕು ಎಂದರು.
ಭಾಷಾಭಿಮಾನ ಇರಲಿ: ಸಾರಿಗೆ ಸಂಸ್ಥೆಯ ಎಲ್ಲ ಸಿಬ್ಬಂದಿಗಳು ತಮ್ಮ ದಿನನಿತ್ಯದ ಒತ್ತಡದ ಕೆಲಸದ ನಡುವೆಯೂ ಸ್ವಲ್ಪ ಸಮಯ ತಮ್ಮ ಮಕ್ಕಳಿಗಾಗಿ ಮೀಸಲಿಟ್ಟು, ಅವರಲ್ಲಿ ಕನ್ನಡ ಭಾಷಾಭಿಮಾನ, ಕನ್ನಡ ಕಲೆ, ಸಾಹಿತ್ಯ, ಸಂಸ್ಕೃತಿಯ ಇತಿಹಾಸ ಬಗ್ಗೆ ತಿಳಿ ಹೇಳಬೇಕು ಎಂದು ಕಿವಿಮಾತು ಹೇಳಿದರು.
ಒಂದು ವೇಳೆ ಪಾಲಕರಾದವರೂ ತಮ್ಮ ಜವಾಬ್ದಾರಿಯನ್ನು ಮರೆತು ಕೇವಲ ಯಾಂತ್ರಿಕವಾಗಿ ಕೆಲಸದಲ್ಲಿಯೇ ತೊಡಗಿದ್ದರೆ ಮುಂದಿನ ಭವಿಷ್ಯದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆಗಳಿರುತ್ತವೆ. ಹಾಗಾಗದಂತೆ ಆರಂಭದಲ್ಲಿಯೇ ಮಕ್ಕಳಲ್ಲಿ ಒಳ್ಳಯ ಸಂಸ್ಕೃತಿ ಮತ್ತು ಸಂಸ್ಕಾರ ನೀಡಬೇಕು ಎಂದರು.
ಒಗ್ಗೂಡಿಸುವ ಕಾರ್ಯವಾಗಲಿ: ಮಮ್ಮಿ, ಡ್ಯಾಡಿ ಇಂಗ್ಲೀಷ್ ಸಂಸ್ಕೃತಿ ವ್ಯಾಮೋಹದಿಂದ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಕಣ್ಮರೆಯಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಶಿವಮೂರ್ತಿ, ಕನ್ನಡ ನಾಡಿದಲ್ಲಿ ಜನಿಸಿ, ಇಂಗ್ಲಿಷ್ ಸಂಸ್ಕೃತಿಗೆ ಮಾರು ಹೋಗಿ ತಮ್ಮತನವನ್ನು ಕಳೆದುಕೊಳ್ಳಬೇಡಿ. ಕನ್ನಡ ನಾಡಿನಲ್ಲಿ ಕನ್ನಡ ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿ, ಕನ್ನಡ ಮನಸುಗಳನ್ನು ಒಗ್ಗೂಡಿಸುವ ಕೆಲಸ ಆಗಬೇಕಾಗಿದೆ ಎಂದರು.
ಗುಲ್ಬರ್ಗ ವಿಶ್ವವಿದ್ಯಾಲಯ ಡಾ. ಜಯಶ್ರೀ ದಂಡೆ ಅವರು ಮಹಾಧಿವೇಶನ ಉದ್ಘಾಟಿಸಿ, ಕನ್ನಡ ನಾಡಿನಲ್ಲಿ ಪರಭಾಷೆ ಬಂದು ಕನ್ನಡಿಗರ ಕನ್ನಡ ಭಾಷೆ ಪರಭಾಷೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಲೋಕಾರ್ಪಣೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ನಾಡಾಭಿಮಾನ ಕೃತಿ ಲೋಕಾರ್ಪಣೆ ಮಾಡಿ, ಸರ್ಕಾರದ ಇಲ್ಲವೇ ಅಧಿಕಾರಿಗಳ ಧೋರಣೆಯಿಂದ ರೊಚ್ಚಿಗೆದ್ದು ನಾಗರಿಕರು, ಸಂಘಟನೆಗಳ ಮುಖಂಡರು ಜನತೆಯ ಆಸ್ತಿಯಾಗಿರುವ ಬಸ್ಸಿಗೆ ಕಲ್ಲು ಹೊಡೆಯುವುದು, ಬೆಂಕಿ ಹಚ್ಚುವ ಕೆಟ್ಟ ಪ್ರವೃತ್ತಿಗೆ ಕೈ ಹಾಕಬಾರದು ಎಂದು ಸಲಹೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿದರು.ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ವ.ಚ. ಚನ್ನೇಗೌಡ ಮಾತನಾಡಿ, ಸಾರಿಗೆ ಸಂಸ್ಥೆಯ ಸುವರ್ಣ ಮಹೋತ್ಸವ ನೆನಪಿನಲ್ಲಿ ಸಂಸ್ಥೆಯ ಎಲ್ಲ ನೌಕರರಿಗೆ ಒಂದು ವಾರ್ಷಿಕ ವೇತನ ಬಡ್ತಿ ನೀಡಬೇಕು ಎಂದು ಮನವಿ ಮಾಡಿದರು. ಸಾರಿಗೆ ಸಂಸ್ಥೆಯ ನಿವೃತ್ತ ನೌಕರರಿಗೆ ರಾಜ್ಯಾದ್ಯಂತ ಸಂಚರಿಸಲು ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಬೇಕು. ಸಂಸ್ಥೆಯ ನೌಕರರ ಮಕ್ಕಳಿಗೆ ತಾಂತ್ರಿಕ ಶಿಕ್ಷಣಕ್ಕೆ ಅನುಕೂಲವಾಗುವಂತೆ ಬೆಂಗಳೂರು, ಹಾಸನ, ಹುಬ್ಬಳ್ಳಿ ಹಾಗೂ ಗುಲ್ಬರ್ಗ ನಗರಗಳಲ್ಲಿ ಡಿಪ್ಲೋಮಾ ಹಾಗೂ ಎಂಜಿನಿಯರಿಂಗ್ ಕಾಲೇಜು ಆರಂಭಿಸಬೇಕು. ಸಂಸ್ಥೆಯ ನೌಕರರಿಗೆ ಎಲ್ಲ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ವಸತಿಗೃಹ ನಿರ್ಮಿಸಿ ಕೊಡಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದರು.
ಈಶಾನ್ಯ ಭಾಗಕ್ಕೆ ಕನ್ನಡಾಧಿಕಾರಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ಜಿಲ್ಲಾ ಕೇಂದ್ರ ಬಸ್ ನಿಲ್ದಾಣಗಳಲ್ಲಿ ಮತ್ತು ಬಸ್ಸುಗಳಲ್ಲಿ ರಾಷ್ಟ್ರಕವಿ ಕುವೆಂಪು ಸೇರಿದಂತೆ ನಾಡು ಕಂಡ ಪ್ರಸಿದ್ಧ ಸಾಹಿತಿಗಳ ನುಡಿಮುತ್ತುಗಳ ನಾಮಫಲಕ ಅಳವಡಿಸುವುದರ ಜತೆಗೆ ಬಸ್ ನಿಲ್ದಾಣಗಳಲ್ಲಿ ಗ್ರಂಥಾಲಯ ಸ್ಥಾಪಿಸಿರುವ ಜಿ.ಎನ್. ಶಿವಮೂರ್ತಿ ಅವರು ಈಶಾನ್ಯ ಭಾಗಕ್ಕೆ ಕನ್ನಡಾಧಿಕಾರಿಯಾಗಿ ಬಂದಿರುವುದು ಹೆಮ್ಮೆಯ ವಿಷಯ ಎಂದು ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲ ಅತಿಥಿಗಳು ಅಭಿಪ್ರಾಯಪಟ್ಟರು.
ಕನ್ನಡ ಭಾಷಾಭಿಮಾನ ಬೆಳೆಸುವುದರ ಜತೆಗೆ ಈ ಭಾಗದ ಪ್ರಸಿದ್ಧ ಕವಿ ನೃಪತುಂಗನ ಹೆಸರನ್ನು ತಮ್ಮ ಸಾರಿಗೆ ಸಂಸ್ಥೆಯ ನಗರ ಸಾರಿಗೆ ಬಸ್ಸಿಗೆ ನಾಮಕರಣ ಮಾಡುವ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ, ಬಂಡಾಯ ಸಾಹಿತಿ ಡಾ. ಚನ್ನಣ್ಣ ವಾಲಿಕಾರ್, ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ, ಜಿಲ್ಲಾ ಕಸಾಪ ಅಧ್ಯಕ್ಷ ಮಹಿಪಾಲ ರೆಡ್ಡಿ ಮುನ್ನೂರ, ಮಾಜಿ ಅಧ್ಯಕ್ಷ ವೀರಭದ್ರ ಸಿಂಪಿ, ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಖೈರೋಜಿ, ಗುಲ್ಬರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎಚ್. ನಾಗೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಕೊಟ್ರಪ್ಪ ಸೇರಿದಂತೆ ಹಲವಾರು ಪ್ರಮುಖರಿಗೆ ಸನ್ಮಾನಿಸಲಾಯಿತು. ಎಸ್.ಎಸ್. ಸಜ್ಜನ್, ಶಕೀಲ್ ಅಹ್ಮದ್, ವೀರಭದ್ರಪ್ಪ ಅರಿಕೇರಿ, ಸಿದ್ಣಣ್ಣ ಸಿಕೇದ್, ಚಂದ್ರಕಾಂತ ಡೊಳ್ಳಿ, ಬಸವರಾಜ ಕಣ್ಣಿ, ಆರ್. ಆಲ್. ಜಾಧವ, ಎಂ.ಎ. ನದಾಫ್, ಎನ್.ಕೆ. ಪಾಟೀಲ್, ವಿ. ವೆಂಕಟೇಶ, ಪ್ರಕಾಶ, ನಾಗೇಶ ಬಡಿಗೇರ್, ಶಿವಪುತ್ರಪ್ಪ ಡಿ. ಪಾಟೀಲ್, ಚನ್ನವೀರಪ್ಪ ಹೂಗಾರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement