'ದಕ್ಷಿಣ ಭಾರತ ಕ್ರೈಸ್ತ ಧರ್ಮಕ್ಷೇತ್ರಗಳಿಗೆ ಕನ್ನಡಿಗ ಧರ್ಮಾಧ್ಯಕ್ಷರ ನೇಮಿಸಿ'
ಕ.ಪ್ರ.ವಾರ್ತೆ ಗುಲ್ಬರ್ಗ ಆ.19
ಕರ್ನಾಟಕದಲ್ಲಿನ ಕ್ಯಾಥೋಲಿಕ್ ಹಾಗೂ ದಕ್ಷಿಣ ಭಾರತ ಕ್ರೈಸ್ತ ಧರ್ಮ ಕ್ಷೇತ್ರಗಳಿಗೆ ಕನ್ನಡ ಮಾತೃಭಾಷೆಯ ಕನ್ನಡಿಗ ಧರ್ಮಾಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಫಾಯಲ್ ರಾಜ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ 14 ಕ್ಯಾಥೋಲಿಕ್ ಮತ್ತು 3 ದಕ್ಷಿಣ ಭಾರತ ಕ್ರೈಸ್ತ ಧರ್ಮ ಕ್ಷೇತ್ರಗಳಲ್ಲಿ ಚಿಕ್ಕಮಗಳೂರು ಧರ್ಮಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಧರ್ಮಕ್ಷೇತ್ರಗಳಲ್ಲಿ ಅನ್ಯಭಾಷಿಕ ಧರ್ಮಾಧ್ಯಕ್ಷರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಕರ್ನಾಟಕ್ಕೆ ಕ್ರೈಸ್ತ ಧರ್ಮ 16ನೇ ಶತಮಾನಕ್ಕೆ ಕಾಲಿಟ್ಟು ಕನ್ನಡ ನಾಡಿಗೆ, ಭಾಷೆ, ಸಂಸ್ಕೃತಿಗೆ, ವಿದ್ಯಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ವಿದೇಶದಿಂದ ಬಂದ ಪಾದ್ರಿಗಳಾದ ರೆವರೆಂಡ್ ಕಿಟೆಲ್, ಬಿ.ಎಲ್. ರೈಸ್, ಹಡ್ಗಿನ್, ಮೋಗ್ಲಿಂಗ್ ಇತರರು ಕನ್ನಡ ಭಾಷೆ ಕಲಿತು ಕನ್ನಡ ಜನತೆಗೆ ಅಪಾರ ಕೊಡುಗೆ ನೀಡಿದ್ದಾರೆ. ವಿದೇಶಿಯರ ಪ್ರಭಾವದಿಂದ ಸ್ಥಳೀಯ ಕನ್ನಡಿಗರು ಕ್ರೈಸ್ತ ಧರ್ಮ ಅಪ್ಪಿಕೊಂಡು ದೇಶಿಯ ಸೊಗಡನ್ನು ತಮ್ಮ ಕನ್ನಡಾಭಿಮಾನದಿಂದ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ಆದರೆ, ಇತ್ತೀಚಿಗೆ ಹೊರ ರಾಜ್ಯಗಳಿಂದ ಬಂದ ತಮಿಳು ಕ್ರೈಸ್ತರು ಮಲೆಯಾಳಿ ಹಾಗೂ ಗೋವಾ ಮೂಲದ ಕೊಂಕಣಿಯವರು ಕನ್ನಡ ಭಾಷೆ ಸಂಸ್ಕೃತಿಗೆ ತೊಡಕಾಗಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರಿನ ಚರ್ಚ್ನಲ್ಲಿ ಕನ್ನಡದ ಪೂಜೆ ನಡೆಸದೇ ತಮಿಳು, ಮಲೆಯಾಳಿ ಹಾಗೂ ಕೊಂಕಣಿ ಭಾಷೆಗಳನ್ನು ಕನ್ನಡಿಗರ ಮೇಲೆ ಹೇರುತ್ತಿದ್ದಾರೆ. ಕರ್ನಾಟಕದಲ್ಲಿನ ಕ್ರೈಸ್ತ ಧರ್ಮಾಧ್ಯಕ್ಷರೇ ಆಯ್ಕೆ ಆಗುತ್ತಿರುವುದು ಕನ್ನಡಿಗ ಕ್ರೈಸ್ತರ ಜೀವನಕ್ಕೂ ತೊಂದರೆ ನೀಡುತ್ತಿದ್ದಾರೆ.
ಕ್ರೈಸ್ತ ಸಂಸ್ಥೆಗಳಲ್ಲಿ, ವಿದ್ಯಾ ಸಂಸ್ಥೆಗಳಲ್ಲಿ ಕನ್ನಡಿಗರ ಪ್ರವೇಶವಿಲ್ಲದಂತೆ ತಡೆಯೊಡ್ಡುತ್ತಿದ್ದಾರೆ ಎಂದು ದೂರಿದರು. ಬೆಂಗಳೂರಿನ ದಕ್ಷಿಣ ಭಾರತ ಕ್ರೈಸ್ತದ ಕರ್ನಾಟಕ ಮಧ್ಯ ಪ್ರಾಂತ್ಯಕ್ಕೆ ತಮಿಳುನಾಡು ಮೂಲದ ತಮಿಳು ಬಿಷಪ್ರನ್ನು ನೇಮಿಸಿರುವುದನ್ನು ಖಂಡಿಸಿ ಕಳೆದ 27 ರಿಂದ ಇಂದಿನವರೆಗೂ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದೆ. ಆದರೆ, ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್ಥಿಕವಾಗಿ ಹಿಂದುಳಿದ ಕ್ರೈಸ್ತರ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ನೀಡಿರುವ 100 ಕೋಟಿ ಸ್ಥಳೀಯ ಕ್ರೈಸ್ತರ ಅಭಿವೃದ್ಧಿಗೆ ಮಾತ್ರ ಉಪಯೋಗಿಸಬೇಕು ಎಂದು ಆಗ್ರಹಿಸಿದರು.
ಕ್ರೈಸ್ತರ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಕನ್ನಡಿಗ ಕ್ರೈಸ್ತರನ್ನು ಧರ್ಮಾಧ್ಯಕ್ಷರನ್ನು ನೇಮಕ ಮಾಡಬೇಕು. ನಿಗಮ ಮಂಡಳಿಗಳಲ್ಲಿ ಕನ್ನಡ ಕ್ರೈಸ್ತರಿಗೆ ಆದ್ಯತೆ ನೀಡಬೇಕು ಮತ್ತು ಕನ್ನಡ ಕ್ರೈಸ್ತರ ಪರವಾಗಿ ದುಡಿಯಲು ಕನ್ನಡ ಕ್ರೈಸ್ತರನ್ನು ಎಂಎಲ್ಸಿ ಮಾಡಬೇಕು ಎಂದು ಒತ್ತಾಯಿಸಿದರು.