ಮಳೆಗೆ ಸೋರುವ ಶಾಲಾ ಕೊಠಡಿ: ಶಾಲೆಗೆ ಬೀಗ
ಕ.ಪ್ರ. ವಾರ್ತೆ ಮುದಗಲ್ ಆ.19
ಸಮೀಪದ ಉಪ್ಪಾರನಂದಿಹಾಳ ಗ್ರಾ.ಪಂ. ವ್ಯಾಪ್ತಿಯ ಗೀಗ್ಯಾನಾಯ್ಕನ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಠಡಿ ಮಳೆಗೆ ಸೋರುವದರಿಂದ ಮಕ್ಕಳಿಗೆ ಕೂಡಲು ಸ್ಥಳಾವಕಾಶ ಕಲ್ಪಿಸುವಂತೆ ಆಗ್ರಹಿಸಿ ತಾಂಡ ನಿವಾಸಿಗಳು, ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಇತ್ತೀಚೆಗೆ ಜರುಗಿದೆ. 1ರಿಂದ 5ನೇ ತರಗತಿವರೆಗೆ 60ಕ್ಕೂ ಹೆಚ್ಚು ಮಕ್ಕಳಿದ್ದು ಎರಡು ಕೊಠಡಿಗಳಿಗೆ ಇಬ್ಬರು ಶಿಕ್ಷಕರು ಮಕ್ಕಳಿಗೆ ಕಲಿಕೆ ನೀಡುತ್ತಿದ್ದಾರೆ. ಎರಡು ಕೊಠಡಿಗಳಲ್ಲಿ ಒಂದು ಕೊಠಡಿ ಸಂಪೂರ್ಣ ಸೋರುತ್ತಿದ್ದು, ಮತ್ತೊಂದು ಕೊಠಡಿಯ ಛಾವಣಿ ಶಿಥಾಲಾವಸ್ಥೆ ತಲುಪಿದೆ.
ಎಲ್ಲಾ ಒಂದೇ ಕಡೆ: ಒಂದೇ ಕೊಠಡಿಯಲ್ಲಿ 50ಕ್ಕೂ ಹೆಚ್ಚು ಮಕ್ಕಳನ್ನು ಕೂಡಿಸಿ ಪಾಠ ಮಾಡುವುದಲ್ಲದೇ ಬಿಸಿಯೂಟದ ಅಕ್ಕಿ, ಬೆಳೆ ಸೇರಿದಂತೆ ಇತರ ವಸ್ತು ದಾಸ್ತಾನು, ಶಾಲಾ ದಾಖಲೆಗಳನ್ನಿಟ್ಟು ಶಿಕ್ಷಕರು ಪಾಠ ಮಾಡುತ್ತಿದ್ದಾರೆ ಎಂದು ಎಸ್ಡಿಎಂಸಿ ಅಧ್ಯಕ್ಷ ಪಿಕು ನಾಯ್ಕ, ಗ್ರಾ.ಪಂ.ಸದಸ್ಯ ನೀಲಪ್ಪ ನಾಯ್ಕ, ತಾಂಡಾದ ನಿವಾಸಿ ತೇಜಪ್ಪ, ರಮೇಶ, ಹನುಮಂತ ಆರೋಪಿಸಿದ್ದಾರೆ. ಮಳೆ ನೀರು ಕೊಠಡಿಯಲ್ಲಿ ಧಾರಾಕಾರವಾಗಿ ಇಳಿಯುವುದರಿಂದ ಶಾಲೆಯ ಒಳ ಭಾಗ ಸಂಪೂರ್ಣ ಜಲಾವೃತವಾಗಿದೆ. ಮಕ್ಕಳು ಕುಳಿತು ಪಾಠ ಕೇಳಲು ಸ್ಥಳಾವಕಾಶ ಇಲ್ಲ. ತರಗತಿಯನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ತೊಡಗಿದರು. ಶಾಲಾ ಛಾವಣಿ ದುರಸ್ತಿಗೊಳಿಸುವಂತೆ ಈ ಭಾಗದ ಜಿ.ಪಂ ಮತ್ತು ತಾ.ಪಂ. ಹಾಗೂ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂದಿಸಿದ ಅಧಿಕಾರಿಗಳು ಗಮಹರಿಸಿ ವಿದ್ಯಾರ್ಥಿಗಳಿಗೆ ಕೊಠಡಿ ವ್ಯವಸ್ಥೆ ಕಲ್ಪಿಸಬೇಕು ಇಲ್ಲವಾದಲ್ಲಿ ಅನಿರ್ದಿಷ್ಟ ಅವಧಿಗೆ ಶಾಲೆಗೆ ಬೀಗ ಜಡಿಯುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.