ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮೊರಾರ್ಜಿ ಕಾಲೇಜು ಫಲಿತಾಂಶ ಸುಧಾರಣೆಗೆ ಒತ್ತು

Rashmi Kasaragodu
Updated On : 20 Aug 2013, 11:50 am

ಕ.ಪ್ರ.ವಾರ್ತೆ   ಬೀದರ್   ಆ.19
ಬೀದರ್ ನಗರದ ಜನವಾಡಾ ರಸ್ತೆಯಲ್ಲಿರುವ ಜಿಲ್ಲೆಯ ಏಕೈಕ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿನ ಪಿಯು ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ ಮುಂದಾಗಿದ್ದು, ನಗರದ ಶಾಹೀನ್ ಕಾಲೇಜಿನ ತಾಂತ್ರಿಕ ನೆರವು ಪಡೆಯಲು ನಿರ್ಧರಿಸಿದೆ.
ಸೋಮವಾರ ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ಅಧ್ಯಕ್ಷತೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ಶಿಕ್ಷಕರು, ಪಾಲಕರು ಮತ್ತು ಶಾಹೀನ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಸಭೆಯಲ್ಲಿ ಈ ಕುರಿತು ತೀರ್ಮಾನಿಸಿ ಫಲಿತಾಂಶ ಹೆಚ್ಚಳ ಕುರಿತು ಚರ್ಚಿಸಲಾಯಿತು. ಶಾಹೀನ್ ಕಾಲೇಜಿನಲ್ಲಿ ಯಾವ ರೀತಿ ಬೋಧನೆ ಮಾಡಲಾಗುತ್ತದೆ. ನಮ್ಮಲ್ಲಿ ಏನು ಬದಲಾವಣೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ತಾಂತ್ರಿಕ ನೆರವು ಪಡೆಯಲಾಗುತ್ತದೆ ವಿನಹ ಇದನ್ನು ಶಾಹೀನ್ ಕಾಲೇಜಿನೊಂದಿಗೆ ಜೋಡಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಸ್ಮಾರ್ಟ್ ಕ್ಲಾಸ್ಗಳ ಮೂಲಕ ಈ ಕಾಲೇಜಿನಲ್ಲಿಯೂ ಬೋಧನೆ ವ್ಯವಸ್ಥೆ ಮಾಡಬಹುದು. ಅದಕ್ಕಾಗಿ ಸರ್ಕಾರದ ನಿಧಿಯಿಂದ ಹಣ ಬಳಸಿಕೊಳ್ಳಬಹುದು. ಅಗತ್ಯ ಬಿದ್ದರೆ ಜಿಲ್ಲಾಡಳಿತ ಅನುದಾನದ ವ್ಯವಸ್ಥೆ ಮಾಡಲಿದೆ. ವಿಶೇಷವಾಗಿ ಸಾಮಾನ್ಯ ಪರೀಕ್ಷೆ (ಸಿಇಟಿ)ಯತ್ತ ಗಮನ ಹರಿಸಲಾಗುತ್ತಿದೆ. ಸಿಇಟಿ ತರಬೇತಿಗಾಗಿ ತಗಲುವ ವೆಚ್ಚವನ್ನು ಭರಿಸಲು ಜಿಲ್ಲಾಡಳಿತದೊಂದಿಗೆ ಪಾಲಕರು ಸಹ ನೆರವು ನೀಡಬೇಕಾಗಿದೆ ಎಂದರು. ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ಮಾತನಾಡಿ, ಮಕ್ಕಳು ಮತ್ತು ಪಾಲಕರ ನಡುವೆ ಹೊಂದಾಣಿಕೆ ಮುಖ್ಯವಾಗಿದೆ. ಮಕ್ಕಳ ಪ್ರತಿ ನಿತ್ಯದ ಚಟುವಟಿಕೆ ಬಗ್ಗೆ ಪಾಲಕರು ಗಮನಿಸುತ್ತಿರಬೇಕು. ಮನೆ ಪಾಠದ ಹಾವಳಿಯಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದನ್ನು ತಡೆಯುವ ಅಗತ್ಯವಿದೆ ಎಂದರು.
ವಸತಿ ನಿಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಖಾಲಿ ನಿವೇಶನದ ಅವಶ್ಯಕತೆ ಇದ್ದು, ಜಿಲ್ಲಾಡಳಿತ ಹುಡುಕಾಟ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪನ್ವಾರ್, ಬೀದರ್ ಸಹಾಯಕ ಆಯುಕ್ತರು, ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ ಶಿವಕುಮಾರ ಸೇರಿದಂತೆ ಮತ್ತಿತರರು ಉಪಸ್ಥಿರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement