ಕಾಲುವೆ, ರಸ್ತೆ ಕಾಮಗಾರಿ ಕಳಪೆ: ಆರೋಪ
ದೇವದುರ್ಗ: ತಾಲೂಕಿನ ಮಸೀದಪೂರ ಗ್ರಾಮದ ಬಳಿಯ ನಾರಾಯಣಪುರ ಬಲದಂಡೆ ಕಾಲುವೆಯ 18ನೇ ವಿತರಣೆ ಕಾಲುವೆಯಲ್ಲಿ ಕೈಗೊಂಡಿರುವ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಹಾಗೆಯೇ ಕಾಲುವೆಯ ಮೇಲಿನ ರಸ್ತೆಗೆ ಮರಂ ಹಾಕಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಗ್ರಾಮದ ಕಾಂಗ್ರೆಸ್ ಯುವ ಮುಖಂಡ ಚನ್ನಪ್ಪ ಹಿಂದ್ಪೂರ ಆರೋಪಿಸಿದ್ದಾರೆ.
ಅವರು ಕೆಬಿಜೆಎನ್ಎಲ್ ನಿಗಮದ ಅಧಿಕಾರಿಗಳಿಗೆ ಈ ಬಗ್ಗೆ ದೂರು ಸಲ್ಲಿಸಿ, ಮಸೀದಪೂರ ಗ್ರಾಮದ ಹತ್ತಿರದಲ್ಲಿರುವ 18ನೇ ವಿತರಣೆ ಕಾಲುವೆಯ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈಗಾಗಲೇ ಕಾಮಗಾರಿಯ ಸಿಮೆಂಟ್ ಕಿತ್ತಿದೆ. ಕಾಲುವೆ ಪಕ್ಕದ ರಸ್ತೆ ಮರಂ ಹಾಕದ್ದರಿಂದ ನಡೆದಾಡಲೂ ಆಗದಂಥ ಸ್ಥಿತಿ ಎಂದು ಆರೋಪಿಸಿದರು.
ರೈತರಿಗೆ ಸಮರ್ಪಕವಾಗಿ ನೀರು ಮುಟ್ಟಬೇಕಾದರೆ ಕಾಲುವೆ ಹೂಳೆತ್ತುವ ಕಾರ್ಯವಾಗಬೇಕಿದೆ. ಆದರೆ ಅಸಮರ್ಪಕ ಕಾರ್ಯ ಕೈಗೊಂಡಿರುವ ಗುತ್ತಿಗೆದಾರರ ಬಿಲ್ ಪಾವತಿಸದಂತೆ ಅವರು ಒತ್ತಾಯಿಸಿದ್ದಾರೆ.