ವಿಪ್ರರಿಂದ ಸಂಭ್ರಮದ ನೂಲು ಹುಣ್ಣಿಮೆ
ಕ.ಪ್ರ.ವಾರ್ತೆ ಗುಲ್ಬರ್ಗ ಆ.20
'ಯಜ್ಞೋಪವೀತಂ ಪರಮಂ ಪವಿತ್ರಂ' ಎಂಬ ಮಂತ್ರೋಚ್ಚಾರಣೆಯೊಂದಿಗೆ, ಅಗ್ನಿದೇವನ ಸ್ಮರಣೆಯ ವೇದಘೋಷಗಳೊಂದಿಗೆ ಬುಧವಾರ ಪೂರ್ಣಿಮೆಯ ದಿನ ವಿಪ್ರ ಬಾಂಧವರು ತಾವು ಧರಿಸುವ ಯಜ್ಞೋಪವೀತವನ್ನು ಬದಲಾಯಿಸುವ ಮೂಲಕ ನೂಲ ಹುಣ್ಣಿಮೆಯನ್ನು ಮಂಗಳವಾರ ಸಂಪ್ರದಾಯಬದ್ಧವಾಗಿ ಆಚರಿಸಿದರು.
ವೇದೋಕ್ತ ಮಂತ್ರಗಳಿಂದ, ಹೋಮ ಹವನಾದಿ ಕಾರ್ಯಗಳೊಂದಿಗೆ, ಪಂಡಿತರು- ಪುರೋಹಿತರ ಉಪಸ್ಥಿತಿಯಲ್ಲಿ ವಿಧಿವತ್ತಾಗಿ ಆಚರಣೆ ನಡೆದಿದ್ದು ವಿಶೇಷ.
ನೂಲ ಹುಣ್ಣಿಮೆ ನಿಮಿತ್ತ ನಡೆದ ಯಜ್ಞೋಪವೀತ ಧಾರಣೆ, ಹೋಮ- ಹವನ ಕಾರ್ಯಕ್ರಮಗಳು ನಗರದ ಬ್ರಹ್ಮಪೂರ ರಾಯರ ಮಠ, ಬಿದ್ದಾಪುರ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ಬಸವೇಶ್ವರ ಕಾಲೋನಿ ರಾಯರ ಮಂದಿರ, ವಿದ್ಯಾನಗರ ಕೃಷ್ಣ ಮಂದಿರ, ಜೇವರ್ಗಿ ಕಾಲೋನಿ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನಗಳಲ್ಲಿ ವಿಧಿವತ್ತಾಗಿ ನಡೆದವು.
ಇಲ್ಲೆಲ್ಲಾ ನೂರಾರು ವಿಪ್ರರು ಭಾಗವಹಿಸುವ ಮೂಲಕ ಹೋಮ ಹವನ ಕಾರ್ಯಗಳಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದರು. ಪಂಡಿತರಾದ ಗೋಪಾಲಾಚಾರ್ಯ ಅಕಮಂಚಿಯವರು ಬ್ರಹ್ಮಪುರರಾಯರ ಮಠದಲ್ಲಿ ಹಾಗೂ ಜೇವರ್ಗಿ ಕಾಲೋನಿ ರಾಯರ ವೃಂದಾವನದಲ್ಲಿ ಪಂಡಿತರಾದ ಗಿರೀಶಾಚಾರ್ಯ ಅಕಮಂಚಿಯವರು ಸೇರಿದಂತೆ ಅನೇಕ ವಿದ್ವಾಂಸರು ತಾವೇ ಮುಂದೆ ನಿಂತು ಧಾರ್ಮಿಕ ಕಾರ್ಯಗಳನ್ನು ನೆರವೇರಿಸುವ ಮೂಲಕ ಸಹಸ್ರಾರು ವಿಪ್ರರು ಯಜ್ಞೋಪವೀತ ಧರಿಸುವಂತೆ ಮಂತ್ರಗಳನ್ನು ಹೇಳಿದರು.
ನಗರದ ಪ್ರಮುಖ ಮಠಗಳು, ಮಂದಿರಗಳ ಅಂಗಳದಲ್ಲಿ ಯಜ್ಞೋಪವೀತ ಧಾರಣ ವಿಧಿವಿಧಾನ ಸಾಂಗೋಪಾಂಗವಾಗಿ ನೆರವೇರಿತು. ಇದೇ ದಿನ ಅನೇಕರು ರಕ್ಷಾ ಬಂಧನ ದಿನವನ್ನಾಗಿಯೂ ಆಚರಿಸಿದರು. ಶಾಲೆಗಳಲ್ಲಿ, ವಿವಿಧ ಸಂಸ್ಥೆಗಳಲ್ಲಿ ಸಹೋದರಿಯರು ಸಹೋದರರಿಗೆ ರಕ್ಷಾಬಂಧನ ಮಾಡಿ ಸಂಭ್ರಮಿಸಿದರು.
ರಕ್ಷಾ ಬಂಧನ ಸಂಭ್ರಮ
ರಕ್ಷಾ ಬಂಧನ ಕಾರ್ಯಕ್ರಮ ನಗರದಲ್ಲಿ ಹಲವರು ಬುಧವಾರವೂ ಆಚರಿಸಲಿದ್ದಾರೆ. ನೂಲ ಹುಣ್ಣಿಮೆ ತಿಥಿ- ವಾರಗಳ ಹಿನ್ನೆಲೆ ನಾಳೆಯೂ ಇರುವುದರಿಂದ ಹಾಗೂ ಹಲವು ಪಂಚಾಂಗಗಳಲ್ಲಿ ಈ ಬಗ್ಗೆ ನಮೂದಿಸಿದ್ದರಿಂದ ಜನರು ಬುಧವಾರವೂ ರಕ್ಷಾ ಬಂಧನ ನಡೆಸಿ ಸಂಭ್ರಮಿಸಲಿದ್ದಾರೆ. ಅನೇಕ ಶಾಲಾ- ಕಾಲೇಜುಗಳಲ್ಲಿ ಬುಧವಾರವೂ ರಕ್ಷಾ ಬಂಧನ ತುಂಬ ದೊಡ್ಡ ಪ್ರಮಾಣದಲ್ಲಿ ಹಬ್ಬದ ರೂಪದಲ್ಲಿ ಆಚರಿಸಲ್ಪಡಲಿದೆ.
ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಸೂಪರ್ ಮಾರ್ಕೆಟ್, ರಾಮ ಮಂದಿರ ವೃತ್ತ ಇಲ್ಲೆಲ್ಲಾ ತರಹೇವಾರಿ ನಮೂನೆಯ ರಾಖಿಗಳಿರುವ ಮಳಿಗೆಗಳು ತಲೆಎತ್ತಿವೆ. ಬೆಲೆ ಏರಿಕೆಯ ಈ ದಿನಗಳಲ್ಲಿ ರಾಖಿಯೂ ತುಂಬ ದುಬಾರಿಯಾಗಿದೆ.
ಆದಾಗ್ಯೂ ಸಹೋದರಿಯರು ಈ ಮಳಿಗೆಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತ ರಕ್ಷಾಬಂಧನದ ಬೆಲೆ ಎಷ್ಟಾದರೇನಂತೆ ಹಬ್ಬ, ಸಂಪ್ರದಾಯ ಆರಣೆ ಮಾಡಬೇಕೆಂಬ ಉತ್ಸಾಹದಲ್ಲಿ ರಾಖಿ ಖರೀದಿಗೆ ಮುಗಿಬಿದ್ದಿದ್ದಾರೆ.