30ರಿಂದ 8ನೇ ಅಖಿಲ ಭಾರತ ಸಮ್ಮೇಳನ
ರಾಯಚೂರು: ಸಿಪಿಎಂಎಲ್ ರೆಡ್ ಫ್ಲ್ಯಾಗ್ ಪಕ್ಷದ 8ನೇ ಅಖಿಲ ಭಾರತ ಸಮ್ಮೇಳನವು ಆ.30 ರಂದು ಮುಂಬಯಿಯಲ್ಲಿ ನಡೆಯಲಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ವಿಜಯಕುಮಾರ್ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಳುವ ಸರ್ಕಾರಗಳ ಜನವಿರೋಧಿ ನೀತಿಯಿಂದಾಗಿ ಜನರ ಬದುಕು ನಿರ್ವಹಣೆ ಕಷ್ಟವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಕೂಟ ಸರ್ಕಾರಗಳ ಬಂಡವಾಳಶಾಹಿ ಪರ ಆಡಳಿತವೇ ಕಾರಣ ಎಂದರು. 3ನೇ ರಂಗ ಬಲಿಷ್ಠಗೊಳ್ಳಬೇಕಾಗಿದ್ದು, ಈ ನಿಟ್ಟಿನಲ್ಲಿ ಪಕ್ಷದ ಸಮ್ಮೇಳನವು ಪ್ರಮುಖ ಪಾತ್ರ ವಹಿಸಲಿದೆ. ಜಾಗತೀಕರಣ ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ದೇಶವನ್ನು ಮುಕ್ತಿದೊರಕಿಸುವ ಅವಶ್ಯಕತೆಯಿದೆ ಎಂದರು. ಪಕ್ಷದ ಮುಖಂಡರನ್ನು ಸಂಘಟಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿ ವಿರುದ್ಧ ಹೋರಾಟ ರೂಪಿಸಲು ಮುಂದಾಗಿದ್ದು, ಅಖಿಲ ಭಾರತ ಸಮ್ಮೇಳನಕ್ಕೆ ಸಂಬಂಧಿಸಿ ಅಗತ್ಯ ಚರ್ಚೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಪಕ್ಷದ ಕೇಂದ್ರ ಸಮಿತಿ ಸದಸ್ಯ ಫ್ರಡಿ ಕೆ.ಟಿ., ರಾಜ್ಯ ಸಮಿತಿ ಸದಸ್ಯ ವೆಂಕಟರೆಡ್ಡಿ, ಕೊಪ್ಪಳದ ಆಶ್ರಯ ಫಲಾನುಭವಿಗಳ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಜಿ.ಎಸ್.ಕಡೆಮನಿ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಎಕ್ಕಿ, ಶ್ರೀನಿವಾಸ್ ಸೇರಿ ಅನೇಕರಿದ್ದರು.
ಇಂದು ತಾಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ
ಸುರಪುರ: ಕಳೆದ ತಿಂಗಳು ರಾಜಿನಾಮೆಯಿಂದ ತೆರವಾಗಿರುವ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ತಾಪಂ ಸಭಾಂಗಣದಲ್ಲಿ ಚುನಾವಣೆ ಜರುಗಲಿದೆ. ಬೆಳಗ್ಗೆ 10 ಗಂಟೆಯಿಂದ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಯಾದಗಿರಿ ಸಹಾಯಕ ಆಯುಕ್ತರಾದ ಬಿ.ಪಿ. ವಿಜಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಚುನಾವಣೆ ಮೂಲಗಳು ತಿಳಿಸಿವೆ. ತಾಪಂ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. 2ನೇ ಅವಧಿಯ ಹತ್ತು ತಿಂಗಳು ದೇವರಗೋನಾಲ ಕ್ಷೇತ್ರದ ಸಾಬಮ್ಮ ದೇಸಾಯಿ ಅಧ್ಯಕ್ಷರಾಗಿದ್ದರು. ಅವರ ರಾಜಿನಾಮೆಯಿಂದ ತೆರವಾದ ಈ ಸ್ಥಾನಕ್ಕೆ ಚುನಾವಣೆ ಜರುಗುತ್ತಿದೆ.
ಮಟಕಾ: ಬಂಧನ
ರಾಯಚೂರು: ಲಿಂಗಸ್ಗೂರು ತಾಲೂಕಿನ ಹಟ್ಟಿ ಗ್ರಾಮದಲ್ಲಿ ಮಟಕಾ ಚೀಟಿ ಬರೆಯುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಆದೆಪ್ಪ ಮತ್ತು ವೀರೇಶ್ ಎಂದು ಗುರುತಿಸಲಾಗಿದೆ. ಇವರು ಗ್ರಾಮದಲ್ಲಿ ಮಟಕಾ ಚೀಟಿ ಬರೆಯುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ರು. 780 ಜಪ್ತಿ ಮಾಡಿದ್ದಾರೆ. ಹಟ್ಟಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.