ಆರ್ಥಿಕ ಸ್ವಾವಲಂಬನೆ ಸಾಧಿಸಿ: ಮರೆಪ್ಪ
ಗುಲ್ಬರ್ಗ: ಗ್ರಾಮೀಣ ಭಾಗದಲ್ಲಿ ಮಹಿಳೆಯರು ಸ್ವಸಹಾಯ ಸಂಘಗಳನ್ನು ಸುವ್ಯವಸ್ಥಿತವಾಗಿ ರಚನೆ ಮಾಡಿಕೊಂಡು ಹಣಕಾಸಿನ ವ್ಯವಹಾರ ನಡೆಸಿದರೆ ಮಹಿಳೆಯರ ಬದುಕು ಬಂಗಾರವಾಗುತ್ತದೆ ಎಂದು ಮರೆಪ್ಪ ನಂದಿಹಳ್ಳಿ ಅಭಿಪ್ರಾಯಪಟ್ಟರು.
ತಾಲೂಕಿನ ಕಲಮೂಡ ಗ್ರಾಮದಲ್ಲಿ ಗುಲ್ಬರ್ಗ ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ವಿಶ್ವ ಸೇವಾ ಮಿಷನ್ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯಲ್ಲಿ (ಬ್ಯಾಚ್-2) ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಉದ್ಯಮಶೀಲತಾ ಜಾಗೃತಿ ತರಬೇತಿ ಉದ್ದೇಶಿಸಿ ಮಾತನಾಡಿದರು.
ಇಂದು ನಗರಗಳಲ್ಲಿರುವ ಮಹಿಳೆಯರು ಜೀವನದ ಎಲ್ಲ ಕ್ಷೇತ್ರಗಳಲ್ಲಿ ಗಣನೀಯವಾದ ಸಾಧನೆ ಮಾಡುತ್ತಿದ್ದಾರೆ. ಅದೇ ರೀತಿಯಾಗಿ ನಮ್ಮ ಗ್ರಾಮೀಣ ಭಾಗದ ಮಹಿಳೆಯರು ವಿಶ್ವ ಸೇವಾ ಮಿಷನ್ ಸಂಸ್ಥೆ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕೊಡುವ ಯಾವುದಾದರೊಂದು ಉದ್ಯಮಶೀಲವಾಗಿರುವ ಕೌಶಲ್ಯಾಧಾರಿತ ತರಬೇತಿ ಪಡೆದು, ಸ್ವಾವಲಂಬನೆ ಸಾಧಿಸಿ ಎಂದು ಕರೆ ನೀಡಿದರು.
ಗ್ರಾಮದ ಹಿರಿಯರಾದ ಪ್ರಕಾಶ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶ್ವ ಸೇವಾ ಮಿಷನ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಅಂಬರೀಷ ಇಟಗಿಕರ್, ಸಚೀನ್, ಆಸರೆ ಸಂಸ್ಥೆ ತಂಡದ ನಾಯಕರಾದ ರವೀಂದ್ರಕುಮಾರ್, ಐಜಿಎ ಸುರೇಶ ಬೊಮ್ಮನಳ್ಳಿ, ರಾಜೇಶ ಗುತ್ತೇದಾರ, ಜಲಾನಯನ ಸಹಾಯಕರಾದ ಮಾಣಿಕಪ್ಪ ಹಾಗೂ ಮನೋಹರ್ ಮತ್ತು ಸಂಘದ ಮಹಿಳೆಯರು ಉಪಸ್ಥಿತರಿದ್ದರು.