ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಾಂಧವ್ಯ ಬೆಸೆಯುವ ರಕ್ಷಾ ಬಂಧನ

Rashmi Kasaragodu
Updated On : 22 Aug 2013, 11:26 am

ಕನ್ನಡಪ್ರಭವಾರ್ತೆ, ಲಿಂಗಸ್ಗೂರು ಆ. 21
ಪ್ರಾಯಶಃ ಜಗತ್ತಿನಲ್ಲಿ ಯಾರೂ ಆಚರಿಸದಷ್ಟು ಹಬ್ಬಗಳನ್ನು ಭಾರತೀಯರು ಆಚರಿಸುತ್ತಾರೆ.
ವಿಭಿನ್ನ ಧರ್ಮೀಯರು, ವಿವಿಧ ಜಾತಿ ಜನಾಂಗದವರು ನೆಲೆಸಿರುವ ನಮ್ಮ ದೇಶದಲ್ಲಿ ಸಂಸ್ಕೃತಿ, ಸಂಸ್ಕಾರ, ಧರ್ಮ, ಭಕ್ತಿ, ಸೇರಿದಂತೆ ಹಬ್ಬ ಹರಿದಿನಗಳ ಆಚರಣೆಗೆ ತನ್ನದೇ ಆತ ಮಹತ್ವ ಪಡೆದಿದೆ.
ಪ್ರಾಚೀನ ಕಾಲದಿಂದಲೂ ಸೌಖ್ಯ, ಸೌಂದರ್ಯ, ಮನೋರಂಜನೆಗಾಗಿ ಮತ್ತು ಹೊಸ ಹಾದಿ ಕಂಡುಕೊಳ್ಳಲು, ಸಾಧನೆ ಸಿದ್ಧಿಸಲು, ಸನ್ಮಾರ್ಗಕ್ಕೆ ತೆರಳಲು, ಆತ್ಮೀಯರನ್ನು ಕೂಡಿಕೊಳ್ಳುವುದರ ಜೊತೆಗೆ ಸಂಘಟನೆಗಾಗಿ ಸಹ ಹಬ್ಬ ಹರಿದಿನಗಳನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶೇಷ: ಅಲ್ಲದೆ ರಾಷ್ಟ್ರೀಯ, ಧಾರ್ಮಿಕ, ಐತಿಹಾಸಿಕ, ಸ್ಥಳೀಯ, ಸಾಮೂಹಿಕ, ವೈಯಕ್ತಿಕ, ಜನಾಂಗೀಕ ಹಬ್ಬಗಳ ಆಚರಣೆ ಕೂಡ ನಾವು ಕಾಣಬಹುದಾಗಿದೆ. ಇಂದು ನಾವುಗಳು ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ನಮ್ಮ ಪೂರ್ವಿಕರು ಹಾಗೂ ಋಷಿ ಮುನಿಗಳು ಖಗೋಳಿಕ ನಿತ್ಯ ಸತ್ಯಗಳ ಪ್ರೇರಕಾಂಶಗಳನ್ನು ಹೊಂದಾಣಿಕೆ ಮಾಡಿರುವುದು ವಿಶೇಷ.
ಹಿಂದೂ ಪಂಚಾಂಗದ ಪ್ರಕಾರ ಸೂರ್ಯ-ಚಂದ್ರರ ಚಲನೆಯನ್ನು ಕೇಂದ್ರವಾಗಿಟ್ಟುಕೊಂಡು ವಿಶಿಷ್ಟ ತಿಥಿ, ನಕ್ಷತ್ರ ಗುರುತಿಸಿದ ವಿಶೇಷ ದಿನಗಳೇ ಹಬ್ಬ ಹರಿದಿನಗಳಾಗಿವೆ. ಇಂತಹ ಹಬ್ಬ ಹರಿದಿನಗಳ ಪೈಕಿ ರಕ್ಷಾ ಬಂಧನ ಹಬ್ಬವೂ ಕೂಡ ಒಂದಾಗಿದೆ.
ಬಾಂಧವ್ಯ: ದೇಶದ ವಿವಿಧ ರಾಜ್ಯಗಳಲ್ಲಿ ರಕ್ಷಾ ಬಂಧನ ಕುರಿತಂತೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಹಾಗೂ ಆಚರಿಸಲ್ಪಡುವ ಹಬ್ಬವಾಗಿದೆ. ವಿಶೇಷವಾಗಿ ಹೆಣ್ಣು ಮಕ್ಕಳು ಆಚರಿಸುವ ಹಬ್ಬಗಳ ಪೈಕಿ ರಕ್ಷಾ ಬಂಧನವೂ ಕೂಡ ಒಂದಾಗಿದ್ದು, ಧಾರ್ಮಿಕ ಆಚರಣೆಯ ಜೊತೆಗೆ ಅಣ್ಣ, ತಂಗಿ ಮಧ್ಯೆ ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ. ಪ್ರತಿವರ್ಷ ನೂಲು ಹುಣ್ಣಿಮೆ ದಿನದಂದು ಆಚರಿಸಲ್ಪಡುವ ರಕ್ಷಾ ಬಂಧನ ಹಬ್ಬವನ್ನು ಈ ವರ್ಷ ಕೆಲವರು ಮಂಗಳವಾರ ಮತ್ತು ಬುಧವಾರದಂದು ಆಚರಿಸುವುದು ಕಂಡು ಬಂದಿತು.
ತಾಲೂಕಿನಾದ್ಯಂತ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ತಮ್ಮ ಒಡಹುಟ್ಟಿದ ಅಣ್ಣ ಅಥವಾ ಸಹೋದರತ್ವದ ಬಾಂಧವ್ಯ ಹೊಂದಿದ ವ್ಯಕ್ತಿಗಳ ಕೈಗೆ ರಕ್ಷಾ ಬಂಧನ (ರಾಖಿ) ಕಟ್ಟುವ ಮೂಲಕ ಕುಂಕುಮ ಹಚ್ಚಿ ಆರತಿ ಬೆಳಗಿ ಸಿಹಿಯನ್ನು ತಿನ್ನಿಸಿದರು. ತಂಗಿಯಿಂದ ರಾಖಿ ಕಟ್ಟಿಸಿಕೊಂಡ ಸಹೋದರ ಪ್ರೀತಿಯಿಂದ ಹಣ ಅಥವಾ ಹೊಸ ಬಟ್ಟೆಯನ್ನು ನೀಡಿ ಗೌರವಿಸುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸುವುದು ಕಂಡು ಬಂದಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement