ವಿದೇಶಿಯರಲ್ಲಿ ಪವಿತ್ರ ಭಾರತದ ಪ್ರತಿಬಿಂಬ
ಕ.ಪ್ರ.ವಾರ್ತೆ, ಚಿತ್ತಾಪುರ, ಆ.21
ವಿಶ್ವದಲ್ಲಿ ಭಾರತ ದೇಶಭಕ್ತಿಗೆ ಪವಿತ್ರ ದೇಶ ಎಂದು ವಿದೇಶಿಯರು ನಮ್ಮ ದೇಶದ ಗೌರವ ಬಗ್ಗೆ ಪ್ರಶಂಸೆ ಮಾಡಿದ್ದಾರೆ ಎಂದು ಕಂಬಳೇಶ್ವರ ಮಠದ ಸೋಮಶೇಖರ ಸ್ವಾಮೀಜಿ ಹೇಳಿದರು.
ಇಲ್ಲಿನ ಈಶ್ವರ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡ ನಂದಿ ಪ್ರತಿಷ್ಟಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ಜರುಗುತ್ತವೆ. ಹೆಚ್ಚೆಚ್ಚು ದೇವಾಲಯಗಳು ನಿರ್ಮಾಣವಾಗುತ್ತಿವೆ. ಇದರಿಂದ ಇಲ್ಲಿಯ ಜನರು ಅದರಲ್ಲಿ ಭಾಗವಹಿಸುವುದರಿಂದ ಅವರಲ್ಲಿ ಶಾಂತಿ, ನೆಮ್ಮದಿ ಉಂಟಾಗುತ್ತದೆ ಎಂದರು.
ಶ್ರಾವಣ ಮಾಸದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಾದ ಪುರಾಣ, ಕಿರ್ತನೆ, ಪುಣ್ಯ ಕಥೆಗಳಲ್ಲಿ ಭಜನೆಗಳಲ್ಲಿ ಭಾಗವಹಿಸುವುದರಿಂದ ಪುಣ್ಯ ಲಭಿಸುತ್ತದೆ. ಅದಕ್ಕಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ದಂಡೋತಿಯ ಬಾಲಯೋಗಿನಿ ಜಯ ಶ್ರೀಮಾತಾ ಮಾತನಾಡಿ, ನಂದಿ ಪ್ರತಿಷ್ಟಾಪನೆಯಿಂದ ಈಶ್ವರ ಸರ್ವ ಜನರಿಗೆ ಕಲ್ಯಾಣ ಉಂಟು ಮಾಡುತ್ತಾನೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಉದ್ದಿಮೆದಾರ ರಾಜಶೇಖರ ಬಳ್ಳಾ ಮಾತನಾಡಿ, ಈಶ್ವರ ಮಂದಿರ ಜೀರ್ಣೋದ್ಧಾರ ಮಾಡಿ ಇಲ್ಲಿಯ ಜನರಿಗೆ ದರ್ಶನ ಭಾಗ್ಯ ದೊರಕಿಸಿರುವ ಕಾರ್ಯ ಶ್ಲಾಘನೀಯ ಎಂದರು.
ನಿವೃತ್ತ ಶಿಕ್ಷಕ ಶಂಕರರಾವ್ ಬರಾಡ ಮಾತನಾಡಿದರು. ಈಶ್ವರ ಮಂದಿರ ಸೇವಾ ಸಮಿತಿ ಅಧ್ಯಕ್ಷ ಅನಂತ ಬಸುದೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ರಾಮಣ, ಮೋಹನ ಕಾಳಗಿ, ಚಂದ್ರಕಾಂತ ಶ್ರವಣ, ಮಹೇಶ ಲೋಮಟೆ, ಲಕ್ಷ್ಮಣ ಲೋಮಟೆ, ಲಕ್ಷ್ಮೀನಾರಾಯಣ ಸುರೆ, ಅನಿಲ್ ತಗಡಗರ್, ಸುರೇಶ ಮಂತಕುಂಟಿ, ಸಚಿನ ಬಳ್ಳಾ ಇತರರು ಇದ್ದರು.
ಕಾರ್ಯಕ್ರಮದಲ್ಲಿ ನಂದಕುಮಾರ್ ಸ್ವಾಗತಿಸಿದರು. ವಿರೇಶ ಕರದಾಳ ನಿರೂಪಿಸಿದರು.