ಸದಾಶಿವ ವರದಿ: ಸಿಎಂಗೆ ಒತ್ತಾಯ
ಮಸ್ಕಿ: ಪಟ್ಟಣಕ್ಕೆ ಆ.25 ರಂದು ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಲಾಗುತ್ತದೆ ಎಂದು ದಲಿತ ಸಾಹಿತಿ ದಾನಪ್ಪ ನಿಲೋಗಲ್ ತಿಳಿಸಿದ್ದಾರೆ. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಹಾಗೂ ಅಹಿಂದ ಚಳವಳಿಯ ನೇತಾರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ಕೂಡಲೇ ವರದಿಯ ಯಥಾವತ್ತು ಜಾರಿಗೆ ಮುಂದಾಗಬೇಕೆಂದು ಭೇಟಿ ವೇಳೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ರಾಯಚೂರು: ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಒಂದು ಅಂಗನವಾಡಿ ಕಾರ್ಯಕರ್ತೆ ಹಾಗೂ 11 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿಯಿದ್ದು, ಈ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೆ.18 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಕಾರ್ಯದರ್ಶಿ, ಅಂಗನವಾಡಿ ಕಾರ್ಯಕರ್ತೆಯರ ಆಯ್ಕೆ ಸಮಿತಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಸಲ್ಲಿಸಲು ಕೋರಲಾಗಿದೆ.
ರಕ್ಷಾ ಬಂಧನ
ಸಿಂಧನೂರು: ನಗರದ ಆಶಾಕಿರಣ ಬಾಲಕಾರ್ಮಿಕರ ಪುನರ್ವಸತಿ ಶಾಲೆಯಲ್ಲಿ ಸಮರ್ಪಣಾ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಬುಧವಾರ ಏರ್ಪಡಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಮದಾಸ ಮಾತನಾಡಿ, ಈ ಶಾಲೆಯಲ್ಲಿ ಕೆಲವರು ಅನಾಥ ಮಕ್ಕಳಾಗಿದ್ದು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಹಾಗೂ ಎಲ್ಲ ಮಕ್ಕಳು ಒಂದೇ ಕುಟುಂಬದ ಸದಸ್ಯರು ಎಂಬ ಭಾವನೆ ಮೂಡಿಸುವ ಉದ್ದೇಶದಿಂದ ಈ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು. ಶಾಲೆಯ ಮುಖ್ಯಗುರು ಮರಿಸ್ವಾಮಿ ಮಾತನಾಡಿದರು. ಪ್ರಮೀಳಾ ಸ್ವಾಗತಿಸಿದರು. ಕುಮಾರಿ ದ್ರಾಕ್ಷಾಯಿಣಿ ನಿರೂಪಿಸಿದರು. ಶಾಲೆಯ ಸಿಬ್ಬಂದಿ ಹಾಗೂ ಅನೇಕ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.