ಸತ್ಯನಾಥ ಗೃಹ ನಿರ್ಮಾಣ ಸಂಘ: ಮಾಹಿತಿಗೆ ಸೂಚನೆ
ರಾಯಚೂರು: ಇಲ್ಲಿನ ಸತ್ಯನಾಥ ಗೃಹ ನಿರ್ಮಾಣ ಸಹಕಾರ ಸಂಘವು ಸರ್ವೇ ನಂಬರ್ 1220 ರಲ್ಲಿ ನಿರ್ಮಿಸಿದ ವಸತಿ ವಿನ್ಯಾಸಕ್ಕೆ ಸಂಬಂಧಿಸಿ ಸಮಗ್ರ ವಿವರ, ದಾಖಲೆಗಳನ್ನು ದೃಢೀಕರಿಸಿ ಸ್ಪಷ್ಟ ಮಾಹಿತಿಯನ್ನು ವಾರದೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ.
ಈ ಕುರಿತು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಆದೇಶ ಹೊರಡಿಸಿರುವ ಅವರು, ಟಿ. ಮಾರೆಪ್ಪ ಎಂಬುವವರು ಸಲ್ಲಿಸಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಪೂರಕವಾಗಿ ಮೂಲ ಬಿನ್ ಶೇತ್ಕಿ ಆದೇಶ, ನಗರ ಯೋಜನಾ ಕಚೇರಿಯಿಂದ ಮಂಜೂರಾದ ಮೂಲ ನಕ್ಷೆ, ನಗರಾಭಿವೃದ್ಧಿ ಪ್ರಾಧಿಕಾರದ ನಿರ್ಣಯ, ಅನುಮೋದಿತ ನಕ್ಷೆ, ಸರ್ಕಾರದ ಮಂಜೂರಾತಿ ಮತ್ತಿತರ ಮಾಹಿತಿ ದಾಖಲೆಗಳೊಂದಿಗೆ ತಮಗೆ ನೀಡುವಂತೆ ಸೂಚಿಸಿದ್ದಾರೆ. ಈ ಸರ್ವೇ ನಂಬರ್ನಲ್ಲಿ ಸ್ಮಶಾನ, ಉದ್ಯಾನ ವನ, ಶಾಲೆ, ಆಟದ ಮೈದಾನಗಳಿಗೆಂದು ಮೀಸಲಿರಿಸಿದ್ದ ಜಾಗದಲ್ಲಿ ನಿಯಮ ಬಾಹಿರವಾಗಿ ನಿವೇಶನಗಳಾಗಿಸಲಾಗಿದೆ. ಕಟ್ಟಡಗಳನ್ನೂ ನಿರ್ಮಿಸಲಾಗಿದೆ ಎಂಬ ದೂರಿನಲ್ಲಿ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಿದ್ದಾಗಿ ತಿಳಿಸಿದ್ದಾರೆ.