ಒತ್ತೆಯಿಟ್ಟ ಬಂಗಾರ ಅಪಹರಣ
ಸಿಂಧನೂರು: ನಗರದ ಶ್ರೀರಾಮ ಚಿಟ್ಸ್ನ ಬಂಗಾರ ಸಾಲದ ವ್ಯವಸ್ಥಾಪಕ ಶಿವಕುಮಾರ ಎನ್ನುವವರು ಗ್ರಾಹಕರು ಒತ್ತೆಯಿಟ್ಟ ಬಂಗಾರವನ್ನು ಅಪಹರಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಶ್ರೀರಾಮ್ ಚಿಟ್ ಫಂಡ್ ಮುಖ್ಯಸ್ಥರು ಲೆಕ್ಕ ತಪಾಸಣೆ ಮಾಡುವ ಸಮಯದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳೀಯ ಶಾಖೆಯ ವ್ಯವಸ್ಥಾಪಕ ಮಲ್ಲಿಕಾರ್ಜುನ ಎನ್ನುವವರು ಶಹರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಎಸ್ಐ ನಿಂಗಪ್ಪ ಎನ್.ಆರ್. ತನಿಖೆ ಕೈಗೊಂಡಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಶಿವಕುಮಾರ ವ್ಯವಸ್ಥಿತವಾಗಿ ಗ್ರಾಹಕರಿಗೆ ಪಂಗನಾಮ ಹಾಕುವ ಪ್ರಯತ್ನ ಮಾಡಿದ್ದಾನೆ.
ಬಂಗಾರ ಚೀಲದಲ್ಲಿ ಕಲ್ಲು: ಬಂಗಾರದ ಸಾಲ ನೀಡುವ ಸಂದರ್ಭದಲ್ಲಿ ಒಡವೆಗಳನ್ನು ಮಾಪನ ಮಾಡಿ, ಚಿಕ್ಕ ಚೀಲದಲ್ಲಿಟ್ಟು ಸೇಫ್ ಲಾಕರ್ನಲ್ಲಿಡುವುದು ಬ್ಯಾಂಕ್ ಪದ್ಧತಿಯಾಗಿದೆ. ಅದರಂತೆ ಈ ಸಂಸ್ಥೆಯ ಬಂಗಾರ ಸಾಲದ ವ್ಯವಸ್ಥಾಪಕ ಶಿವಕುಮಾರ ಸಹ ಗ್ರಾಹಕರ ಎದುರಿನಲ್ಲಿ ಬಂಗಾರವನ್ನು ಚೀಲದಲ್ಲಿಟ್ಟು ನಂತರ ಆ ಬಂಗಾರ ತೆಗೆದುಕೊಂಡು ಚಿಕ್ಕಚಿಕ್ಕ ಕಲ್ಲುಗಳನ್ನಿಟ್ಟು ಲಾಕರ್ ಮುಚ್ಚಿರುವುದು ತಪಾಸಣೆಯಿಂದ ತಿಳಿದು ಬಂದಿದೆ.
60 ಲಕ್ಷಕ್ಕೂ ಹೆಚ್ಚು ಹಾನಿ: ಗ್ರಾಹಕರು ಒತ್ತೆಯಿಟ್ಟ ಸುಮಾರು 60 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರವನ್ನು ಶಿವಕುಮಾರ ಅಪಹರಿಸಿದ್ದಾನೆಂದು ವ್ಯವಸ್ಥಾಪಕ ಮಲ್ಲಿಕಾರ್ಜುನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮರುಪಾವತಿ ಯತ್ನ: ಬಂಗಾರ ಅಪಹರಿಸಿರುವ ಮೋಸದ ವಿಷಯ ತಿಳಿಯುತ್ತಿದ್ದಂತೆ ಶಿವಕುಮಾರ ತಾನು ರು. 60ಲಕ್ಷ ಮೌಲ್ಯದ ಬಂಗಾರವನ್ನು ಕಳ್ಳತನ ಮಾಡಿಲ್ಲ. ರು. 40 ಲಕ್ಷ ಬೆಲೆ ಬಾಳುವ ಒಡವೆಗಳನ್ನು ಅಪಹರಿಸಿದ್ದು, ಆ ಹಣವನ್ನು ಮರುಪಾವತಿ ಮಾಡುವುದಾಗಿ ಹೇಳುತ್ತಿದ್ದಾನೆ. ಆದರೆ ಚಿಟ್ಫಂಡ್ ಮುಖ್ಯ ವ್ಯವಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳು ಆತನ ವಿನಂತಿಯನ್ನು ಕೇಳದೇ ಪೊಲೀಸರಿಗೆ ದೂರು ನೀಡಿದ್ದಾರೆ.
ಯಾರು ಹೊಣೆ?: ಗ್ರಾಹಕರು ಚಿಟ್ ಫಂಡ್ ಸಂಸ್ಥೆಯ ಮೇಲೆ ನಂಬಿಕೆಯಿಟ್ಟು ಬಂಗಾರ ಒಡವೆಗಳ ಮೇಲೆ ಸಾಲ ಪಡೆದಿದ್ದು, ಗ್ರಾಹಕರಿಗೆ ಚಿಟ್ ಫಂಡ್ನವರು ನೀಡುವ ಭರವಸೆ ಏನೆಂದು ಪ್ರಶ್ನಿಸಿರುವ ಸಾರ್ವಜನಿಕರು ಸಂಸ್ಥೆಯೇಇದಕ್ಕೆ ಹೊಣೆಯಾಗಿದ್ದು, ಬಂಗಾರವನ್ನು ಮೊದಲಿನಂತೆ ವಾಪಸ್ ಕೊಡುವಂತೆ ಒತ್ತಾಯಿಸಿದ್ದಾರೆ.