ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಗರಸಭೆ ಮೀಸಲು ಪ್ರಕಟ: ರಾಜಕೀಯ ಮೇಲಾಟ ಆರಂಭ

Mainashree
Updated On : 25 Aug 2013, 11:08 am

 ವಿಶೇಷ ವರದಿ
ಕ.ಪ್ರ.ವಾರ್ತೆ  ರಾಯಚೂರು  ಆ.24
ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಇಲ್ಲಿನ ನಗರಸಭೆಯಲ್ಲಿ ಬಹುಮತವಿದ್ದರೂ ಮೀಸಲಾತಿ ಆ ಪಕ್ಷದ ಪರ ಪ್ರಕಟಗೊಳ್ಳದಿರುವುದು ಗೊಂದಲಕ್ಕೆ ದಾರಿ ಮಾಡಿದೆ. ನಗರಸಭೆ ಅಧ್ಯಕ್ಷ ಸ್ಥಾನ ಪಕ್ಷೇತರ ಸದಸ್ಯೆಗೆ ಅಧ್ಯಕ್ಷ ಸ್ಥಾನ ಒಲಿಯುವಂತೆ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಕಳೆದ ಮಾರ್ಚ್‌ನಲ್ಲಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದ್ದರೂ, ರಾಜ್ಯ ವಿಧಾನಸಭೆ ಚುನಾವಣೆ ಪ್ರಕ್ರಿಯೆ ನೀತಿ ಸಂಹಿತೆ ಜಾರಿ, ಹೊಸ ಸರ್ಕಾರದ ರಚನೆಯಿಂದಾಗಿ ವಿಳಂಬವಾಗಿತ್ತು. ಹಾಗಾಗಿ, ಸದಸ್ಯರಾಗಿ ಆಯ್ಕೆಯಾದವರಿಗೆ ಕೆಲಸವಿಲ್ಲವಾಗಿತ್ತು. ರಾಜ್ಯ ಸರ್ಕಾರ ಶುಕ್ರವಾರ ಮೀಸಲಾತಿ ಪ್ರಕಟಿಸಿದ ನಂತರದಲ್ಲಿ ರಾಜಕೀಯ ಚುರುಕುಗೊಂಡಿದೆ. ನಗರಸಭೆಯಲ್ಲಿ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೀಗ ಸರ್ಕಾರದ ಮೀಸಲಾತಿ ಪಟ್ಟಿಯೇ ಗೊಂದಲಕ್ಕೆ ಬೀಳಿಸಿದೆ.
ಕಳೆದ ಅವಧಿಗೆ ಇಲ್ಲಿನ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿತ್ತು. ಆ ವೇಳೆಯೇ ಚುನಾವಣೆಗಳು ಬಂದಿದ್ದರಿಂದ ಕಾಂಗ್ರೆಸ್ ನಗರದ ಅಭಿವೃದ್ಧಿಗೆ ಶ್ರಮಿಸಿದ್ದಾಗಿ ಹೇಳಿತ್ತು. ಅಂತೆಯೇ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಪಡೆದಿತ್ತು.
ಆದರೆ, ರಾಜ್ಯ ಸರ್ಕಾರ ಪ್ರಕಟಿಸಿದ ಮೀಸಲಾತಿಯಿಂದ ಕಾಂಗ್ರೆಸ್ ಪಕ್ಷದಲ್ಲಿ ಬೇಸರ ಮೂಡಿದೆ. ರಾಜ್ಯ ಸರ್ಕಾರ ಅಧ್ಯಕ್ಷ ಸ್ಥಾನವನ್ನು ಎಸ್ಟಿಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ “¸’ ಮಹಿಳೆಗೆ ಮೀಸಲಿರಿಸಿ ಆದೇಶ ಹೊರಡಿಸಿದೆ. ಸದ್ಯ 35 ವಾರ್ಡುಗಳಿಂದ ಆಯ್ಕೆಯಾದವರಲ್ಲಿ ನಗರದ 6ನೇ ವಾರ್ಡಿನ ಪಕ್ಷೇತರ ಮಹಿಳಾ ಸದಸ್ಯೆ ಮಹಾದೇವಮ್ಮ ಅವರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ ಪಡೆಯುತ್ತಾರೆ.
ಇದು ಕಾಂಗ್ರೆಸ್‌ಗೆ ಇರುಸು ಮುರುಸು ಉಂಟುಮಾಡಿದೆ. ಆ ಪಕ್ಷದಿಂದ ಆಯ್ಕೆಯಾದವರು ಮೀಸಲಾತಿಗೆ ಒಳಪಡದಿರುವುದು ಪಕ್ಷದ ನಾಯಕರಲ್ಲಿ ಬೇಸರ ತಂದಿದೆ. ಕಾಂಗ್ರೆಸ್ ಹೈಕಮಾಂಡ್‌ಗೆ ಈಗಾಗಲೇ ನಗರಸಭೆಯಲ್ಲಿನ ಮೀಸಲಾತಿ ಗೊಂದಲದ ಬಗ್ಗೆ ಮಾಹಿತಿ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಾಯಕರು ಮೀಸಲಾತಿ ಪ್ರಕ್ರಿಯೆ ವೇಳೆ ನಗರಸಭೆ ಅಧ್ಯಕ್ಷ ಸ್ಥಾನ ಪಡೆಯಲು ಪರಿಶಿಷ್ಟ ಜಾತಿ ಇಲ್ಲವೇ ಹಿಂದುಳಿದ 'ಬ' ವರ್ಗಕ್ಕೆ ನಿಗದಿಗೆ ಪ್ರಭಾವ ಬೀರಿದ್ದರು. ಆದರೆ, ಅಂಥ ಯಾವುದೇ ಪ್ರಭಾವಕ್ಕೆ ಮಣಿಯದ ಅಧಿಕಾರಿಗಳ ವರ್ಗ ಸುಪ್ರೀಂ ಕೋರ್ಟ್‌ನ ಸೂಚನೆಯಂತೆಯೇ ಮೀಸಲಾತಿ ನಿಗದಿ ಮಾಡಿದ್ದು, ಕಾಂಗ್ರೆಸ್ ನಾಯಕರಿಗೆ ಬಿಸಿ ತುಪ್ಪವಾಗಿದೆ.
ಒಂದೆಡೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಿಂದ ಕೈ ತಪ್ಪುತ್ತಿದ್ದಂತೆಯೇ ಉಪಾಧ್ಯಕ್ಷ ಸ್ಥಾನವನ್ನಾದರೂ ಪಡೆಯಲು ಮೂರೂ ಪಕ್ಷಗಳು ರಾಜಕೀಯ ಮೇಲಾಟಕ್ಕೆ ತೊಡಗಿವೆ.
ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ 'ಎ' ಮಹಿಳೆಗೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಬಿರುಸಿನ ಪೈಪೋಟಿಗಿಳಿದಿವೆ. ಕಾಂಗ್ರೆಸ್ ನಲ್ಲಿ ಪದ್ಮಾ ಜಿಂದಪ್ಪ, ಕಮ್ಲಲ್‌ಬೀ ಬಾಬರ್, ಖಾಜಾಬಿ ಅವರು ಆಕಾಂಕ್ಷಿಗಳಾಗಿದ್ದರೆ, ಜೆಡಿಎಸ್‌ನಲ್ಲಿ ಸೀಮಾ ನದಾಫ್, ನಿಖತ್ ಸಲ್ಮಾ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಲ್ಲಿ ಮೀಸಲಾತಿಗೆ ಅರ್ಹರಿಲ್ಲ.
ಗುಂಪುಗಾರಿಕೆ ಕಾರಣ:  ಜಿಲ್ಲಾ ಕಾಂಗ್ರೆಸ್ ನಾಯಕರಲ್ಲಿನ ಗುಂಪುಗಾರಿಕೆ ಪರಿಣಾಮ ಒಂದು ಗುಂಪು ಮತ್ತೊಂದು ಗುಂಪಿಗೆ ಅಧ್ಯಕ್ಷ ಸ್ಥಾನ ಒಲಿಯದಂತೆ ಮಾಡಲು, ಸ್ಥಳೀಯ ನಗರಸಭೆಯ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಗೆ ದೊರೆಯದಂತೆ ಮೀಸಲು ನಿಗದಿಯಾಗುವಂತೆ ಮಾಡಿದೆ ಎಂಬ ಮಾತು ಕೇಳಿಬಂದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement