ಶಿಸ್ತು, ಸಮಯಪ್ರಜ್ಞೆ ಅವಶ್ಯ: ಡಿಸಿ ನಾಗರಾಜು
ರಾಯಚೂರು: ಶಿಸ್ತು ಹಾಗೂ ಸಮಯಪ್ರಜ್ಞೆಯಿಂದ ಮಾತ್ರ ವಿದ್ಯಾರ್ಥಿ ಬದುಕಿನಲ್ಲಿ ಸಾಧನೆ ಮೆರೆಯಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಬದುಕಿನಲ್ಲಿ ಶಿಸ್ತು, ಸಮಯಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಕರೆ ನೀಡಿದರು.
ನಗರದ ಕರ್ನಾಟಕ ವೆಲ್ಫೇರ್ ಟ್ರಸ್ಟ್‌ನ ಶಾಲೆಯಲ್ಲಿ ಇಸ್ಕಾನ್ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳು ಕೇವಲ ಪಠ್ಯಗಳ ಅಧ್ಯಯನದಲ್ಲಿ ತೊಡಗದೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಾಧನೆ ಮೆರೆಯಬೇಕೆಂದು ಸಲಹೆ ನೀಡಿದರು.
ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳು ತೊಡಗಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಬಸವರಾಜಸ್ವಾಮಿ, ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ವರದಕೃಷ್ಣದಾಸ ಮತ್ತಿತರರು ಇದ್ದರು. ಶಾಲಾ ಮಕ್ಕಳು ಪಾಲ್ಗೊಂಡಿದ್ದರು.