ಸಿಎಂ ಆಗಮನಕ್ಕೆ ಧೂಳೂರು ಸಿಂಗಾರ
ಸಿಂಧನೂರು: ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸುತ್ತಿರುವುದರಿಂದ ನಗರ ನವ ವಧುವಿನಂತೆ ಸಿಂಗಾರಗೊಳ್ಳುತ್ತಿದೆ.
ನಗರದ ಮಹಾತ್ಮಗಾಂಧಿ ವೃತ್ತದಲ್ಲಿ 2 ವರ್ಷದಿಂದ ಬಿದ್ದಿದ್ದ ಗುಡ್ಡೆ ಗಾತ್ರದ ಘನ ತ್ಯಾಜ್ಯ ವಸ್ತುಗಳನ್ನು ನಗರಸಭೆ ಸಿಬ್ಬಂದಿ ಕಳೆದ ಎರಡು ದಿನದಿಂದ ತೆಗೆದು ಹಾಕುತ್ತಿದ್ದಾರೆ. ಗಾಂಧಿ ವೃತ್ತದ ಬಳಿ ಲೋಕೋಪಯೋಗಿ ಇಲಾಖೆಯ ರು. 190.16 ಕೋಟಿ ಸಿಂಧನೂರು-ಗಿಣಿಗೇರಾ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಗೆ, ರು. 139.27 ಕೋಟಿ ರೂ ವೆಚ್ಚದಲ್ಲಿ ಸಿಂಧನೂರು-ಕುಷ್ಟಗಿ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಗೆ, 5.91 ಕೋಟಿ ವೆಚ್ಚದಲ್ಲಿ ಜೆಸ್ಕಾಂ ಇಲಾಖೆಯ ಆರ್ಎಪಿಡಿಆರ್ಪಿ ಯೋಜನೆ ಚಾಲನೆ ನೀಡುವುದರಿಂದ ಆ ಪ್ರದೇಶವನ್ನೆಲ್ಲಾ ಸಂಪೂರ್ಣ ಸ್ವಚ್ಛಗೊಳಿಸಿ ವೇದಿಕೆ ನಿರ್ಮಾಣ ಮಾಡಿದ್ದಾರೆ.
ಏಳುರಾಗಿ ಕ್ಯಾಂಪಿನಲ್ಲಿ ವಾಜಪೇಯಿ ಆಶ್ರಯ ಯೋಜನೆಯಡಿ 381 ಮನೆ ನಿರ್ಮಾಣ ಕಾಮಗಾರಿಗೆ, ರು. 1.45ಕೋಟಿ ವೆಚ್ಚದಲ್ಲಿ ಸಿಂಧನೂರು ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ವಿಶ್ರಾಂತಿ ಕೊಠಡಿ, ಪ್ರಯೋಗಾಲಯ ಕೋಣೆ ಕಾಮಗಾರಿಗಳಿಗೂ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ.
ನಂತರ ಪಿ.ಡಬ್ಲ್ಯು.ಡಿ. ಕ್ಯಾಂಪಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜ್ ಮೈದಾನದಲ್ಲಿ ಬೃಹತ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುವರು.