ಸುದ್ದಿ ಸಂಕ್ಷೇಪ
ತ್ರಿವಿಕ್ರಮ್ ಜೋಷಿ ಆಯ್ಕೆ
ರಾಯಚೂರು: 2013-14ನೇ ಸಾಲಿಗೆ ರಾಜ್ಯ ವಾಣಿಜ್ಯೋದ್ಯಮ ಮಹಾಮಂಡಲದ ಕಾರ್ಯಕಾರಿಣಿ ಸಮಿತಿಗೆ ಸದಸ್ಯರಾಗಿ ರಾಯಚೂರು ವಾಣಿಜ್ಯೋದ್ಯಮ ಸಂಘದ ಗೌರವ ಕಾರ್ಯದರ್ಶಿ ತ್ರಿವಿಕ್ರಮ್ ಜೋಷಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಸಂಘದ ಅಧ್ಯಕ್ಷ ಜವಾಹರ ಜೈನ್ ತಿಳಿಸಿದ್ದಾರೆ. ಸತತ 3ನೇ ಬಾರಿಗೆ ಜೋಷಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೋಷಿ ಅವರನ್ನು ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳ ವಿಭಾಗೀಯ ಸಮಿತಿ ಅಧ್ಯಕ್ಷರಾಗಿ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆಯ ಅಧ್ಯಕ್ಷ ಆರ್. ಶಿವಕುಮಾರ್ ನೇಮಿಸಿದ್ದಾರೆಂದು ತಿಳಿಸಿದ್ದಾರೆ.
ಸಿಎಂಗೆ ಮುತ್ತಿಗೆ ಬೆದರಿಕೆ: ಬಂಧನ
ರಾಯಚೂರು: ಸಿಂಧನೂರಿಗೆ ಆ.25ರಂದು ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮದ ವೇಳೆ ಮುತ್ತಿಗೆ ಹಾಕಲು ಉದ್ದೇಶಿಸಿದ್ದ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಸೇರಿ ಇಬ್ಬರನ್ನು ಮುಂಜಾಗ್ರತೆ ಕ್ರಮವಾಗಿ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ. ಜಿಲ್ಲೆಯ ಮಾನವಿಯಲ್ಲಿ ಅಕ್ರಮ ಕಲ್ಲಿನ ಗಣಿಗಾರಿಕೆಗೆ ಸಂಬಂಧಿಸಿ ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸುವಲ್ಲಿ ಜಿಲ್ಲಾಡಳಿತದ ವೈಫಲ್ಯ ಮತ್ತು ಸಿಎಂ ಕಚೇರಿ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಸಂಘದ ಕಾರ್ಯಕರ್ತರು ಆ.25 ರಂದು ಸಿಎಂ ಗೆ ಸಿಂಧನೂರಿನಲ್ಲಿ ಮುತ್ತಿಗೆ ಹಾಕಲು ಸಿದ್ಧತೆ ನಡೆಸಿದ್ದರು. ಪ್ರತಿಭಟನೆ ಮುನ್ಸೂಚನೆ ಅರಿತ ನಗರದ ಸದರ್ ಬಜಾರ್ ಪೊಲೀಸರು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಮತ್ತು ರಾಜಶೇಖರ್ ಅವರನ್ನು ಬಂಧಿಸಿದ್ದು, ಆ.27 ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಹೊಸ ವಿದ್ಯುತ್ ಪರಿವರ್ತಕಕ್ಕೆ ಒತ್ತಾಯ
ರಾಯಚೂರು: ಮಾನವಿ ತಾಲೂಕಿನ ಕುರ್ಡಿ ಗ್ರಾಮದ 6ನೇ ವಾರ್ಡಿನಲ್ಲಿ 3 ತಿಂಗಳಿನಿಂದ ವಿದ್ಯುತ್ ಪರಿವರ್ತಕ ಸುಟ್ಟು ಕತ್ತಲೆಯಲ್ಲಿ ನಿವಾಸಿಗಳು ಜೀವನ ನಡೆಸುವಂತಾಗಿದೆ. ಸಮಸ್ಯೆ ಪರಿಹರಿಸುವಂತೆ ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ. ಈ ಕುರಿತು ಮಾನವಿಯ ಜೆಸ್ಕಾಂಗೆ ದೂರು ಸಲ್ಲಿಸಿರುವ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮಣ ಕುರ್ಡಿ, ಗ್ರಾಮದ 6ನೇ ವಾರ್ಡಿನಲ್ಲಿ ಕಳೆದ ಮೂರು ತಿಂಗಳಿನಿಂದ ಪದೇ ಪದೇ ವಿದ್ಯುತ್ ಪರಿವರ್ತಕ ಸುಟ್ಟು ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು. ವಿದ್ಯುತ್ ಪರಿವರ್ತಕದ ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ತೊಂದರೆಯಾಗಿದೆ. ರಾತ್ರಿ ವೇಳೆ ವಿದ್ಯುತ್ ಕೈಕೊಡುವುದರಿಂದ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ಕಾರಣ ಕೂಡಲೇ ಹೊಸ ವಿದ್ಯುತ್ ಪರಿವರ್ತಕ ಒದಗಿಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದ್ದಾರೆ.