ಚರ್ಚ್ ಕಟ್ಟಡದ ಶಿಲೆಗೆ ಧಕ್ಕೆ: ಕ್ರಮಕ್ಕೆ ದಸಂಸ ಒತ್ತಾಯ
ರಾಯಚೂರು: ತಾಲೂಕಿನ ಗಟ್ಟುಬಿಚ್ಚಾಲಿ ಗ್ರಾಮದಲ್ಲಿ ಚರ್ಚ್ ಉದ್ಘಾಟನೆ ಸಮಾರಂಭಕ್ಕೆ ಅಳವಡಿಸಿದ್ದ ಶಿಲಾನ್ಯಾಸದ ಕಲ್ಲಿಗೆ ಧಕ್ಕೆಯುಂಟು ಮಾಡಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈ.ಕ. ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಈ ಕುರಿತು ಈಚೇಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಗಟ್ಟುಬಿಚ್ಚಾಲಿ ಗ್ರಾಮದಲ್ಲಿ ಆ.23 ರಂದು ಮೆಥೋಡಿಸ್ಟ್ ಚರ್ಚ್ನ ನವೀಕರಿಸಿದ್ದು, ಈ ದೇವಾಲಯಕ್ಕೆ ನೆರವಾದ ದಾನಿಗಳ ಹೆಸರಿದ್ದ ಶಿಲಾನ್ಯಾಸಕ್ಕೆ ಗ್ರಾಮದ ಕೆಲ ದುಷ್ಕರ್ಮಿಗಳು ತಮ್ಮ ಹೆಸರು ಕೈಬಿಡಲಾಗಿದೆ ಎಂದು ಆರೋಪಿಸಿ ಧ್ವಂಸಗೊಳಿಸಿದ್ದಾರೆಂದು ದೂರಿದ್ದಾರೆ.
ಗ್ರಾಮದ ಕೆಲವರು ಅಕ್ರಮ ಕೂಟ ರಚಿಸಿಕೊಂಡು ಸಾರ್ವಜನಿಕರ ಎದುರೇ ಮೆಥೋಡಿಸ್ಟ್ ಚರ್ಚ್ನ ಗೋಡೆಗೆ ಅಳವಡಿಸಿದ್ದ ಶಿಲೆಯನ್ನು ಧ್ವಂಸಗೊಳಿಸಿದ್ದಾರೆ. ಕೂಡಲೇ ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಘಟನೆಯ ರಾಜ್ಯಾಧ್ಯಕ್ಷ ರಾಮಾಂಜನೇಯಲು, ರಾಜ್ಯ ಸಂಘಟನಾ ಕಾರ್ಯದರ್ಶಿ ಪೋಲರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು ಹೊಸೂರು ಸೇರಿ ಅನೇಕರು ಮನವಿ ಮಾಡಿದ್ದಾರೆ.