ನಾಮನಿರ್ದೇಶನಕ್ಕೆ ಒತ್ತಾಯಿಸಿ ಮನವಿ
ಸಿಂಧನೂರು: ತಾಲೂಕಿನ ಎಪಿಎಂಸಿಗೆ ಶ್ರಮಿಕ ಸಂಘಟನೆಗಳಿಂದ ಜನಸಂಖ್ಯೆಗನುಗುಣವಾಗಿ ಕನಿಷ್ಠ ಇಬ್ಬರು ಶ್ರಮಿಕ ಪ್ರತಿನಿಧಿಗಳನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲು ಎಐಟಿಯುಸಿ ನೇತೃತ್ವದ ಹಮಾಲರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಎಂ.ಎಚ್. ಅಂಬರೀಶ ಅವರಿಗೆ ಮನವಿಪತ್ರ ಸಲ್ಲಿಸಿತು.
ಸರ್ಕಾರ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳ ಮಾದರಿಯಲ್ಲಿ ಈಗಾಗಲೇ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಿದ್ದು, ಅದನ್ನು ಜಾರಿಗೆಗೊಳಿಸಲು ಹಮಾಲರನ್ನು ಈ ಮಂಡಳಿಯಲ್ಲಿ ಸೇರಿಸಿ ಸಾಮಾಜಿಕ ಭದ್ರತೆ, ಆರೋಗ್ಯ ಇನ್ನಿತರ ಸೌಲಭ್ಯಗಳನ್ನು ದೊರೆಯುವಂತೆ ಮಾಡಬೇಕು. ರಾಜೀವ್ಗಾಂಧಿ ವಸತಿ ಯೋಜನೆಯಡಿ ಈ ಮೊದಲಿನಂತೆ ಎಪಿಎಂಸಿ ಕಡೆಯಿಂದ ಮನೆಗಳನ್ನು ನೀಡಬೇಕು, ಶೇ.25ರಷ್ಟು ಸಹಾಯಧನ ನೀಡಬೇಕು, ಹಮಾಲರು ಸ್ವಾಭಾವಿಕ ಅಥವಾ ಅಪಘಾತದಿಂದ ಮರಣಹೊಂದಿದರೆ, 2.50 ಲಕ್ಷ ವಿಮಾ ಯೋಜನೆ ಅಳವಡಿಸಬೇಕು, ಮರಣಹೊಂದಿದವರ ಶವ ಸಂಸ್ಕಾರಕ್ಕೆ ಹತ್ತು ಸಾವಿರ ನೀಡಬೇಕು, ಈಗಾಗಲೇ ಸರ್ವೇ ನಂ.9,1 ಹೊಸಲಾಪುರ.ಡಿ.ನಲ್ಲಿ 127 ನಿವೇಶನಗಳ ನೀಲನಕ್ಷೆ ತಯಾರಾಗಿದ್ದು, ಆ ನಿವೇಶನಗಳನ್ನು ಹಮಾಲರಿಗೆ ಕೂಡಲೇ ಹಂಚಿ ಮನೆಗಳನ್ನು ನಿರ್ಮಾಣ ಮಾಡಬೇಕೆಂಬ ಬೇಡಿಕೆ ಸೇರಿದಂತೆ ಪ್ರಮುಖ 15 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಬಾಷುಮಿಯಾ, ಕಾರ್ಯದರ್ಶಿ ಶರಣಪ್ಪ ಗೊರೇಬಾಳ, ಗೌರವಾಧ್ಯಕ್ಷ ವೆಂಕನಗೌಡ ಗದ್ರಟಗಿ, ಬಾಷುಸಾಬ ಕಿಡದೂರು, ಅಲ್ಲಾವಲಿ, ಹನುಮಂತಪ್ಪ ಹಂಚಿನಾಳ ಭಾಗವಹಿಸಿದ್ದರು.