ಸಿಎಂ ವಾಹನಕ್ಕೆ ಅಡ್ಡಿ: ಲಾಠಿ, ಬಂಧನ
ರಾಯಚೂರು: ಮಾನವಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಯುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ ಮತ್ತು ಕ್ರಮ ಕೈಗೊಳ್ಳುವಲ್ಲಿ ಸಿಎಂ ಕಚೇರಿ ಹಸ್ತಕ್ಷೇಪ ಖಂಡಿಸಿ ಸಿಂಧನೂರಿನಲ್ಲಿ ಭಾನುವಾರ ಆಗಮಿಸಿದ್ದ ಸಿಎಂ ಗೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರೈತ ಸಂಘದ ಹಾಗೂ ಭೂರಹಿತ ಹೋರಾಟ ಸಮಿತಿ ಕಾರ್ಯಕರ್ತರಿಗೆ ಲಘು ಲಾಠಿ ಪ್ರಯೋಗಿಸಿದ ಪೊಲೀಸರು, ಹಲವರನ್ನು ಬಂಧಿಸಿದ್ದಾರೆ.
ಸಿಂಧನೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಮೆರವಣಿಗೆ ಮುಗಿಸಿ ತಮ್ಮ ವಾಹನದಲ್ಲಿ ಸಾಗುತ್ತಿದ್ದ ವೇಳೆ ಮಾರ್ಗ ಮಧ್ಯೆ ಕರ್ನಾಟಕ ರೈತ ಸಂಘ ಹಾಗೂ ಭೂರಹಿತ ಹೋರಾಟ ಸಮಿತಿಯ ನೂರಾರು ಕಾರ್ಯಕರ್ತರು ಅವರ ವಾಹನಕ್ಕೆ ತಡೆಯೊಡ್‌ಡಲು ಯತ್ನಿಸಿದ್ದಾರೆ. ಈ ವೇಳೆ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಬೀಸಿದ್ದಾರೆ.
ಮಾನವಿ ಹೊರವಲಯದಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಈ ಬಗ್ಗೆ ಅಕ್ರಮ ಸಾಬೀತಾಗಿದ್ದರೂ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಂಡಿಲ್ಲ. ಅದೇ ರೀತಿ ಸಿಎಂ ಕಚೇರಿಯು ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ಬೆಂಬಲಕ್ಕೆ ನಿಂತಿದ್ದನ್ನು ಖಂಡಿಸಿ ಭಾನುವಾರ ಮುತ್ತಿಗೆ ಕಾರ್ಯಕ್ರಮ ಆಯೋಜಿಸಿದ ವೇಳೆ ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ಮಾಡಿದ ಪೊಲೀಸರು ಮುಖಂಡ ನಾಗರಾಜ್ ಪೂಜಾರ್ ಸೇರಿ ಅನೇಕರನ್ನು ಬಂಧಿಸಿದ್ದಾರೆ.